ನವದೆಹಲಿ[ಜೂ.18]: ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಜೊತೆಗಿನ ಮೈತ್ರಿಗೆ ಮತದಾರನಿಂದ ಹೇಳಿಕೊಳ್ಳುವಂತಹ ಬೆಂಬಲ ಸಿಗದೇ ಮುಖಭಂಗ ಅನುಭವಿಸಿರುವ ಸಮಾಜವಾದಿ ಪಕ್ಷ(ಎಸ್‌ಪಿ) ಈಗ ಪಕ್ಷವನ್ನು ಬಲಗೊಳಿಸುವ ನಿರ್ಧಾರಕ್ಕೆ ಬಂದಿದೆ.

2022ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಮೈತ್ರಿಯಿಂದಾಗಿ ಯಾದವರ ಮತ ಒಡೆದಿದೆ ಎನ್ನುವ ವಿಚಾರವಾಗಿ ಹೇಳಿಕೆ ನೀಡಿದ್ದರಿಂದ ಅವರ ನಿರ್ಧಾರಕ್ಕೆ ಕಾಯದೇ ಪಕ್ಷವನ್ನು ಬಲಬಡಿಸಿಕೊಳ್ಳಲು ಎಸ್‌ಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಕಳೆದ ವಾರವೇ ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಸಭೆ ನಡೆಸಿ ಗುಪ್ತವಾಗಿ ಚರ್ಚಿ ನಡೆಸಿದ್ದಾರೆನ್ನಲಾಗಿದೆ.

2022ರಲ್ಲಿ ತನ್ನ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಈಗಿಂದಲೇ ತೊಡಗಿಕೊಳ್ಳಬೇಕಿದೆ ಎಂಬ ಸ್ಪಷ್ಟಸಂದೇಶವನ್ನು ನೀಡಿದ್ದಾರೆ ಎನ್ನಲಾಗಿದೆ.