ನವದೆಹಲಿ: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದರೊಂದಿಗೆ ಮತ್ತು ಅಮಿತ್‌ ಶಾ ಮತ್ತೊಮ್ಮೆ ಗೃಹ ಖಾತೆ ಸಚಿವರಾಗುವುದರೊಂದಿಗೆ 9 ವರ್ಷಗಳ ಬಳಿಕ ಇತಿಹಾಸ ಪುನಾವರ್ತನೆ ಆದಂತಾಗಿದೆ. ಹೌದು. ಮೋದಿ ಮತ್ತು ಶಾ ಜೋಡಿ ಹೊಸತೇನಲ್ಲ. 2010ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಅಮಿತ್‌ ಶಾ ಅವರು ಗುಜರಾತ್‌ನ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸೊಹ್ರಾಬುದ್ದೀನ್‌ ನಕಲಿ ಎನ್ಕೌಂಟರ್‌ ಆರೋಪದ ಪ್ರಕರಣದಲ್ಲಿ ಶಾ ಅವರನ್ನು ಸಿಬಿಐ ಬಂಧಿಸಿದ ಬಳಿಕ ಇಬ್ಬರೂ ಪಕ್ಷಕ್ಕೆ ಒಂದಾಗಿ ಕೆಲಸ ಮಾಡಿದ್ದರಾದರೂ, ಸರ್ಕಾರದಲ್ಲಿ ಒಂದಾಗಿರಲಿಲ್ಲ.

ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಮೋದಿ ಅವರಷ್ಟೇ ಪ್ರಮುಖ ಪಾತ್ರ ವಹಿಸಿದ್ದ ಅಮಿತ್‌ ಶಾ ಈ ಬಾರಿ ರಾಷ್ಟ್ರೀಯ ಅಧ್ಯಕ್ಷ ಪಟ್ಟತೊರೆದು ಸಚಿವ ಸಂಪುಟ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಹೀಗಾಗಿ ಸಂಪುಟದಲ್ಲಿ ನಂ.1 ಖಾತೆ ಮತ್ತು ಪ್ರಧಾನಿ ನಂತರದಲ್ಲಿ ಸಚಿವ ಸಂಪುಟದಲ್ಲಿ ನಂ.1 ಹುದ್ದೆ ಎಂಬ ಹಿರಿಮೆ ಹೊಂದಿರುವ ಗೃಹ ಖಾತೆಯನ್ನು ಅಮಿತ್‌ ಶಾಗೆ ವಹಿಸಲಾಗಿದೆ. ಹೀಗಾಗಿ 9 ವರ್ಷಗಳ ನಂತರ ಮತ್ತೆ ಮೋದಿ ಮತ್ತು ಅಮಿತ್‌ ಶಾ ಜೋಡಿ ಒಂದಾಗಿದೆ.

ಮೋದಿ ಅವರು 13 ವರ್ಷ ಗುಜರಾತ್‌ ಅನ್ನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಸಿಎಂ ನಂತರ ಅತ್ಯಂತ ಪ್ರಭಾವಿಶಾಲಿ ಸಚಿವರಾಗಿದ್ದವರು ಅಮಿತ್‌ ಶಾ. ಶಾ ಗುಜರಾತ್‌ನಲ್ಲಿ ಗೃಹ, ಕಾನೂನು ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದರು.