ಬೆಂಗಳೂರು(ಸೆ.13): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿನ್ನೆ ಮತ್ತೆ ಸುಪ್ರೀಂ ಕೋರ್ಟ್ ನಿಂದ ಕರ್ನಾಟಕ ರಾಜ್ಯಕ್ಕೆ ವ್ಯತಿರಿಕ್ತವಾಗಿ ಆದೇಶ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಹೊತ್ತಿ ಉರಿದಿದೆ.

ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೆ ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದು ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮುಖ್ಯರಸ್ತೆ ಹಾಗು ಅತ್ತಿಬೆಲೆ ಗಡಿ ಭಾಗಗಳಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸರು ಎಲ್ಲೆಡೆ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ.

ತಮಿಳರ ಹೋಟೆಲ್ ಗಳು ಹಾಗೂ ಕಂಪನಿಗಳಿಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಿದ್ದಾರೆ. ಇನ್ನು ಅತ್ತಿಬೆಲೆ ಗಡಿಯಿಂದ ತಮಿಳುನಾಡಿಗೆ ಹಾಗೂ ತಮಿಳುನಾಡಿನ ಹೊಸೂರು ಗಡಿಯಿಂದ ಬೆಂಗಳೂರು ಕಡೆಗೆ ಯಾವುದೇ ವಾಹನಗಳನ್ನು ಬಿಡದೆ ಇರುವುದರಿಂದ ಹೊಸೂರು ಮುಖ್ಯರಸ್ತೆ ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ.

ಅತ್ತಿಬೆಲೆ ಗಡಿಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.