ಬೆಂಗಳೂರು[ಜು.27]: ಬಹುವರ್ಷಗಳ ನಂತರ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದ ಗದ್ದುಗೆ ಏರಿರುವುದರಿಂದ ಕರ್ನಾಟಕ ಅಭಿವೃದ್ಧಿಯಲ್ಲಿ ದಾಪುಗಾಲು ಇಡಬಹುದು ಎಂಬ ನಿರೀಕ್ಷೆ ಮೂಡಿಸಿದೆ.

ರಾಜ್ಯ ವಿಧಾನಸಭೆಗೆ ಹೆಚ್ಚೂ ಕಡಿಮೆ ನಾಲ್ಕು ವರ್ಷಗಳು ಬಾಕಿ ಉಳಿದಿದ್ದು, ಕೇಂದ್ರದಲ್ಲಿ ಬಿಜೆಪಿಗೆ ಐದು ವರ್ಷಗಳ ಅವಧಿ ಉಳಿದಿದೆ. ಹೀಗಾಗಿ, ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಿದಲ್ಲಿ 1994ರ ನಂತರ ಎರಡರಲ್ಲೂ ಒಂದೇ ಪಕ್ಷ ಸುದೀರ್ಘ ಅವಧಿ ಅಧಿಕಾರದಲ್ಲಿದ್ದ ಸರ್ಕಾರಗಳು ಎಂಬ ದಾಖಲೆ ಸರಿಗಟ್ಟಬಹುದು

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿದ್ದು, ಪೂರ್ಣಾವಧಿ ಪೂರೈಸಿದ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಇಲ್ಲವೇ ಇಲ್ಲ. 1989ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ 19994ರವರೆಗೆ ಅಧಿಕಾರದಲ್ಲಿತ್ತು (ನಡುವೆ ಏಳು ದಿನಗಳ ರಾಷ್ಟ್ರಪತಿ ಆಳ್ವಿಕೆ ಹೊರತುಪಡಿಸಿ). ಇದೇ ವೇಳೆ 1991ರ ಜೂನ್ ನಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರ 1996ರವರೆಗೆ ಅಸ್ತಿತ್ವದಲ್ಲಿತ್ತು. ಹೀಗಾಗಿ, ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಎರಡರಲ್ಲೂ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿ ಎಸ್.ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದರು.