ಬೆಂಗಳೂರು :  ಕಳೆದ ಇಪ್ಪತ್ತು ವರ್ಷಗಳ ಬಳಿ ಇದೇ ಮೊದಲ ಬಾರಿಗೆ ಲಾಲ್‌ಬಾಗ್‌ ಒಳಭಾಗದ ರಸ್ತೆಗಳಿಗೆ ಡಾಂಬರು ಕಾಣುತ್ತಿದ್ದು, ಮೇ ಅಂತ್ಯದ ವೇಳೆಗೆ ಉದ್ಯಾನದ ಒಳಗಿನ ಐದು ಕಿಲೋಮೀಟರ್‌ ರಸ್ತೆಗಳು ಸುಸ್ಥಿತಿಯಲ್ಲಿ ಕಾಣಲಿವೆ.

ಉದ್ಯಾನದ ಒಳಗಿನ ರಸ್ತೆಗಳ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿತ್ತು, ರಸ್ತೆ ಅಕ್ಕಪಕ್ಕದ ಗಿಡ, ಮರಗಳ ಬೇರುಗಳು ರಸ್ತೆ ಬುಡದಿಂದ ಹಾದು ಹೋಗಿದ್ದರಿಂದ ಕೆಲವು ಕಡೆ ರಸ್ತೆ ಸಮತಟ್ಟಾಗಿರಲಿಲ್ಲ. ಇದರಿಂದಾಗಿ ವಾಯು ವಿಹಾರಕ್ಕಾಗಿ ಬರುವ ಜನರಿಗೆ ಓಡಾಡಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ನಡಿಗೆದಾರರ ಸಂಘಗಳು ರಸ್ತೆ ಸರಿಪಡಿಸುವಂತೆ ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸರ್ಕಾರ ಈಗ ಹಣ ಬಿಡುಗಡೆ ಮಾಡಿದ್ದು, ಡಾಂಬರೀಕರಣದ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಎರಡು ಕೋಟಿ ಬಿಡುಗಡೆ:

ಲಾಲ್‌ಬಾಗ್‌ನಲ್ಲಿ ರಸ್ತೆಗಳ ಡಾಂಬರೀಕರಣಕ್ಕೆ ಸರ್ಕಾರ .2 ಕೋಟಿ ಬಿಡುಗಡೆ ಮಾಡಿದೆ. ಸದ್ಯ ರಸ್ತೆಗಳ ಎರಡು ಬದಿಯಲ್ಲಿನ ಕಲ್ಲುಗಳನ್ನು ಎತ್ತರಿಸಲಾಗುತ್ತಿದೆ. ಸೋಮವಾರ ಈ ಕಾಮಗಾರಿ ಅಂತ್ಯವಾಗಲಿದೆ. ನಂತರ ಡಾಂಬರೀಕರಣ ಕಾರ್ಯ ಪ್ರಾರಂಭವಾಗಲಿದ್ದು, ಮೇ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಈಗಿರುವ ರಸ್ತೆಗಳಿಗೆ ಮಾತ್ರ ಡಾಂಬರ್‌ ಹಾಕುತ್ತಿದ್ದು, ಹೊಸದಾಗಿ ಯಾವುದೇ ರಸ್ತೆಗಳನ್ನು ನಿರ್ಮಿಸುತ್ತಿಲ್ಲ. ಅಲ್ಲದೆ, ಕೆಂಗಲ್‌ ಹನುಮಂತಯ್ಯ ವೃತ್ತದಿಂದ (ಶಾಂತಿನಗರ ಮಾರ್ಗದ ದ್ವಾರ) ಡಾ.ಎಂ.ಎಚ್‌.ಮರೀಗೌಡ ಸಭಾಂಗಣದವರೆಗೂ ಈಗಾಗಲೇ ಡಾಂಬರ್‌ ಹಾಕಲಾಗಿದೆ. ಇದೀಗ ಗಾಜಿನ ಮನೆಯ ಮುಂಭಾಗದ ರಸ್ತೆ, ಪಶ್ಚಿಮ ದ್ವಾರದ ಮಾರ್ಗ, ತೋಟಗಾರಿಕೆ ಇಲಾಖೆ ನಿರ್ದೇಶಕರ ಕಚೇರಿ ರಸ್ತೆ ಹಾಗೂ ಕೃಂಬಿಗಲ್‌ ಗ್ರಂಥಾಲಯದ ರಸ್ತೆಗಳಿಗೆ ಡಾಂಬರ್‌ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ(ಲಾಲ್‌ಬಾಗ್‌) ಎಂ.ಚಂದ್ರಶೇಖರ್‌ ತಿಳಿಸಿದ್ದಾರೆ.