ಬೆಂಗಳೂರು :  ನೀಲ ನಭದಲ್ಲಿ ‘ಸಾರಂಗ’ದ ವೈಯಾರ, ‘ಸೂರ್ಯ ಕಿರಣ ’ಗಳ ತಕಧಿಮಿ ನೃತ್ಯ, ಈ ಲೋಹದ ಹಕ್ಕಿಗಲು ಬಿಡಿಸಿದ ಬಣ್ಣ ಬಣ್ಣಗಳ ರಂಗೋಲಿಯ ಚಿತ್ತಾರ ಅಳಿಸುವ ಮುನ್ನವೇ ಅಬ್ಬರಿಸಿ ಆಕಾಶವನ್ನೇ ಸೀಳಿಕೊಂಡು ಬಂದಂತೆ ಭಾಸವಾಗುವ ಸುಖೋಯ್, ರಫೇಲ್  ಯುದ್ಧ ವಿಮಾನಗಳು ಆರ್ಭಟಿಸುತ್ತಾ ಧಾವಿಸ ತೊಡಗಿದಾಗ ನೆರೆದಿದ್ದ ಎಲ್ಲರ ಎದೆ ಬಡಿತ ದುಪ್ಪಟ್ಟು.

ಎರಡು ವರ್ಷಕ್ಕೊಮ್ಮೆ ನಡೆಯುವ ‘ಏರೋ ಇಂಡಿಯಾ-  2019 ’ಗೆ ಕ್ಷಣಗಣನೆ ಶುರುವಾಗಿದ್ದು, ಯಲಹಂಕದ ವಾಯುನೆಲೆಗೆ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಹಾರಿ ಬಂದಿರುವ ಲೋಹದ ಹಕ್ಕಿಗಳು ತಮ್ಮ ಕಲರವ ಆರಂಭಿಸಿವೆ. ಫೆ. 20ರಿಂದ ಆರಂಭವಾಗುವ ವೈಮಾನಿಕ ಪ್ರದರ್ಶನಕ್ಕೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ನಾಗರಿಕ ವಿಮಾನಗಳು ತಮ್ಮ ಶಕ್ತಿ, ಸಾಮರ್ಥ್ಯ, ವೇಗದ ಪರಿಚಯವನ್ನು ನೀಡಲು ಸೋಮವಾರ ಯಲಹಂಕದ ಬಾನಂಗಳ ದಲ್ಲಿ ತಾಲೀಮು ನಡೆಸಿದವು.

ಚಿತ್ತಾರ ಬಿಡಿಸಿದ ಸೂರ್ಯ ಕಿರಣ: ವೈಮಾನಿಕ ಪ್ರದರ್ಶನ ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ತಂಡವು ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸಿದವು. ಅಲ್ಲದೆ, ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್‌ಗಳು, ವಾಯು ನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು. 

ಯಲಹಂಕ ವಾಯುನೆಲೆಯಲ್ಲಿ ರಫೇಲ್: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರೆಫೇಲ್-೭ ಜಿಎಸ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು. ನಾಲ್ಕು ರಫೇಲ್ ವಿಮಾನಗಳನ್ನು ಫ್ರಾನ್ಸ್‌ನಿಂದ ಯಲಹಂಕ ವಾಯು ನಲೆಗೆ ಆಗಮಿಸಿವೆ. ಮೂರು ವಿಮಾನಗಳು ತಾಲೀಮು ಪ್ರದರ್ಶನ ನಡೆಸಿದವು. ಒಂದು ವಿಮಾನ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಲಾಗಿದೆ.

36 ದೇಶಿ ವಿಮಾನಗಳು: 12 ನೇ ಆವೃತ್ತಿಯ ಏರೋ ಇಂಡಿಯಾ ‘ಏರ್ ಶೋ 2019’ನಲ್ಲಿ 36 ದೇಶಿ ವಿಮಾನಗಳು, 7 ವಿದೇಶಿ ವಿಮಾನಗಳು ಹಾಗೂ ಭಾರತೀಯ ವಾಯು ಸೇನೆಯ (ಐಎಎಫ್) 11 ವಿಮಾನಗಳು ಭಾಗಿಯಾಗಿವೆ. ಸುಮಾರು 31 ವಿಮಾನಗಳು ಬಾನಂಗಳದಲ್ಲಿ ಪ್ರದರ್ಶನ ನೀಡಲಿವೆ. ಇನ್ನುಳಿದ 17 ವಿಮಾನಗಳನ್ನು ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಫೆ.20 ರಿಂದ ಐದು ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನದಲ್ಲಿ ದಿನಕ್ಕೆ ಎರಡು ಬಾರಿ ಪ್ರದರ್ಶನ ನಡೆಯಲಿವೆ. ಬೆಳಗ್ಗೆ 10 ರಿಂದ 12 ಹಾಗೂ 2 ರಿಂದ 5 ಗಂಟೆ ವರೆಗೂ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಸಾರ್ವಜ ನಿಕರಿಗೆ ಮನೋರಂಜನೆ ಒದಗಿಸಲಿ. ಈ ಪ್ರದರ್ಶನದಲ್ಲಿ ಸಿವಿಲ್ ಏವಿಯೇಶನ್, ಡ್ರೊನ್ ಒಲಂಪಿಕ್, ಫೋಟೋಗ್ರಫಿ ಕಾಂಟೆಸ್ಟ್, ಸ್ಟೂಡೆಂಟ್ ಪೆವಿಲಿಯನ್, ವಿಮೆನ್ಸ್ ಡೇ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುಗಳಾಗಲಿವೆ ಎಂದು ಏರೋ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

370 ಕ್ಕೂ ಅಧಿಕ ಕಂಪನಿಗಳು ಭಾಗಿ: 12 ನೇ ವೈಮಾನಿಕ ಪ್ರದರ್ಶನಲ್ಲಿ ಭಾರತದ ಎಚ್‌ಎಎಲ್, ಬಿಎಚ್‌ಇಎಲ್, ಡಿಆರ್‌ಡಿಒ , ಬೆಮೆಲ್, ಅಮೆರಿಕದ ಎಫ್- 16 , ಎಫ್ - 18, ಫ್ರಾನ್ಸ್‌ನ ಡೆಸಾಲ್ಟ್, ಏರ್ ಬಸ್, ಜರ್ಮನಿ, ಕೊರಿಯಾ, ಸೌದಿ ಅರೇಬಿಯಾ, ಇಸ್ರೇಲ್, ಇಟಲಿ, ಜಪಾನ್, ರಷ್ಯಾ, ಸ್ವಿಡ್ಜರ್‌ಲ್ಯಾಂಡ್, ಉಕ್ರೇನ್, ಯುಎಇ, ದಕ್ಷಿಣ ಆಫ್ರಿಕಾ, ಬ್ರಿಟನ್ ಸೇರಿದಂತೆ ಒಟ್ಟು 370 ಕ್ಕೂ ಹೆಚ್ಚು ಕಂಪನಿಗಳು ಏರ್ ಶೋದಲ್ಲಿ  ಭಾಗವಹಿಸಲಿವೆ. 

ಸ್ವೀಡನ್‌ನ ಗ್ರೈಪೆನ್ ಆಕರ್ಷಣೆ: ಸ್ವೀಡನ್ ದೇಶ ತಯಾರಿಸಿರುವ ಗ್ರೈಪೆನ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿದ್ದು, ಬಹಳ ಆಕರ್ಷಣಿಯವಾಗಿದೆ.  ಈ ಯುದ್ಧ ವಿಮಾನ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, 15.2 ಮೀ. ಉದ್ದವಿದೆ. ಇದರ ರೆಕ್ಕೆಗಳು 8.6 ಮೀ ಇದ್ದು, 16 ,500 ಕೆ.ಜಿ ತೂಕವನ್ನು ಒತ್ತೊಯ್ಯಬಲ್ಲದು. ಇದು ಒಂದು ತಾಸಿಗೆ 2,500 ಕಿ.ಮೀ. ಹಾರಾಟ ನಡೆಸಲಿದ್ದು, ಒಂದು ಎಂಜಿನ್‌ನನ್ನು ಹೊಂದಿದೆ. 

ದಂಪತಿ ಒಟ್ಟಾಗಿ ವಿಮಾನ ಹಾರಿಸುತ್ತಾರೆ: ಮಹಾರಾಷ್ಟ್ರದ ಸ್ನೇಹಾ ಕುಲಕರ್ಣಿ ಮತ್ತು ಪತಿ ರವೀಶ್ ಕುಲಕರ್ಣಿ ಪೈಲೆಟ್ ಗಳಾಗಿದ್ದು, ವಿಶೇಷವಾಗಿ ಇಬ್ಬರು ಒಂದೇ ತಂಡದಲ್ಲಿದ್ದಾರೆ. ಇಬ್ಬರು ಸಾರಂಗ್ ವಿಮಾನದ ವಿಂಗ್ ಕಮಾಂಡರ್ ಗಳಾಗಿದ್ದು, ಈ ಬಾರಿ ಹೃದಯಾಕಾರದ ಚಿತ್ರದಂತೆ ಏರ್ ಶೋ ಹಾರಾಟ ನಡೆಸಲಿದ್ದಾರೆ. ಈ ತಂಡದಲ್ಲಿ ರಾಜ್ಯದ ಬಾಗಲಕೋಟೆಯ ವಿಂಗ್ ಕಮಾಂಡರ್ ಗಿರೀಶ್ ಕುಮಾರ್
ಇದ್ದಾರೆ. ಹಾಗೇ ಮೂವರು ಮಹಿಳೆಯರು ಪೈಲೆಟ್ ಗಳಾಗಿದ್ದಾರೆ.