ಬೆಂಗಳೂರು(ನ. 07): ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಶೂಟಿಂಗ್ ವೇಳೆ ಸಂಭವಿಸಿದ ಇಬ್ಬರು ನಟರ ಸಾವಿಗೆ ನಾಯಕನಟ ಯಶ್ ಸಂತಾಪ ಸೂಚಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಯಶ್, ಸ್ಟಂಟ್ ಮಾಡುವ ಮುನ್ನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. "ಈಜು ಬರದಿದ್ದವರನ್ನು ಬಿಡಿ, ಈಜು ಬರುವವರೂ ಕೂಡ ಇಂಥ ಸ್ಟಂಟ್'ಗಳನ್ನು ಮಾಡಲು ಹೆದರುತ್ತಾರೆ. ಸೇಫ್ಟಿ ಮೆಷರ್ಸ್ ಇದ್ದರೂ ಏಟು ಬೀಳುವ ಸಾಧ್ಯತೆ ಇರುತ್ತದೆ. ಈ ಘಟನೆಯಲ್ಲಿ ಪಕ್ಕಾ ಬೇಜವಾಬ್ದಾರಿತನ ಎದ್ದುಕಾಣುತ್ತದೆ" ಎಂದು ಯಶ್ ಹೇಳಿದ್ದಾರೆ.

ಇಬ್ಬರು ನಟರು ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳದೇ ಇಂಥ ಸ್ಟಂಟ್ ಮಾಡಿದ್ದು ತಪ್ಪು ಎಂಬುದು ಯಶ್ ಅಭಿಪ್ರಾಯ. ಆದರೆ, ಯಾರನ್ನೂ ಹೊಣೆ ಮಾಡುವ ಸಂದರ್ಭ ಇದಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಿ ತಪ್ಪು ತಿದ್ದಿಕೊಳ್ಳುವಂತಾಗಬೇಕು ಎಂದು ಯಶ್ ಸಲಹೆ ನೀಡಿದ್ದಾರೆ.

"ರಾಘವ್ ಉದಯ್ ಮತ್ತು ಅನಿಲ್ ಇಬ್ಬರೂ ಬಹಳ ಹಾರ್ಡ್'ವರ್ಕಿಂಗ್ ವ್ಯಕ್ತಿಗಳು. ಅವರಿಬ್ಬರು ಎಷ್ಟು ಕಷ್ಟಪಟ್ಟಿದ್ದಾರೆಂದು ನನಗೆ ಚೆನ್ನಾಗಿ ಗೊತ್ತು. ಮೊನ್ನೆ ತಾನೆ ಒಟ್ಟಿಗೆ ಕೂತು ಊಟ ಮಾಡಿದ್ದೆವು" ಎಂದು ಇದೇ ವೇಳೆ ಯಶ್ ಮೃತರನ್ನು ಸ್ಮರಿಸಿಕೊಂಡರು.

ಇಂದು ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಮಾಸ್ತಿಗುಡಿ ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ದುನಿಯಾ ವಿಜಿ, ಉದಯ್ ಮತ್ತು ಅನಿಲ್ ಮೂವರೂ ಕೂಡ ಹೆಲಿಕಾಪ್ಟರ್'ನಿಂದ ಜಲಾಶಯಕ್ಕೆ ಧುಮುಕುತ್ತಾರೆ. ಇವರಲ್ಲಿ ದುನಿಯಾ ವಿಜಿ ಬದುಕುಳಿಯುತ್ತಾರೆ. ಇನ್ನಿಬ್ಬರು ನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾರೆ.