ನವದೆಹಲಿ : ಪಕ್ಷದಲ್ಲಿದ್ದುಕೊಂಡೆ ಬಿಜೆಪಿಯ ಟೀಕಾಕಾರರಾಗಿರುವ ಸಂಸದ ಶತ್ರುಘ್ನ ಸಿನ್ಹಾ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನಟನೆಯಿಂದ ರಾಜಕೀಯಕ್ಕೆ ಇಳಿದ ಶತ್ರುಘ್ನ ಸಿನ್ಹಾ, ಕಿರುತೆರೆ ನಟಿಯೋರ್ವಳನ್ನು ಮಾನವ ಸಂಪನ್ಮೂಲ ಸಚಿವೆಯಾಗಿ ನೇಮಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ಮೋದಿ ಅವರು ನೇರವಾಗಿ ನಟಿಯೋರ್ವರಿಗೆ ಅತ್ಯಂತ ಮಹತ್ವದ ಖಾತೆಯಾದ ಮಾನವ ಸಂಪನ್ಮೂಲ ಇಲಾಖೆ ಹೊಣೆ ನೀಡಿದ್ದರು. ನೇರವಾಗಿ ಈ ರೀತಿ ಖಾತೆ ವರ್ಗಾಯಿಸಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. 

ಗಾಂಧಿ ಕುಟುಂಬದ ಅಭಿಮಾನಿ :  ಅಲ್ಲದೇ ಇದೇ ವೇಳೆ ತಾವು ಗಾಂಧಿ ಕುಟುಂಬದ ಅಭಿಮಾನಿಯಾಗಿದ್ದು, ಮೊದಲು ಜವಹಾರ್ ನೆಹರು ಅಭಿಮಾನಿ, ನಂತರ ಸೋನಿಯಾ ಗಾಂಧಿ ಈಗ ರಾಹುಲ್ ಗಾಂಧಿ ಅಭಿಮಾನಿ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ದೂರ ಸರಿಯುವ ಯತ್ನ ನಡೆಯುತ್ತಿದೆಯಾ ಎನ್ನುವ ಅನುಮಾನ ಮೂಡಿದೆ. 

ಅಲ್ಲದೇ ಬಿಜೆಪಿ ಒನ್ ಮ್ಯಾನ್ ಶೋ ಆಗಿದ್ದು 2 ಮ್ಯಾನ್ ಆರ್ಮಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ಅವರಿಗೆ ಯಾವುದೇ ರೀತಿಯ ಗೌರವವೂ ಸಿಗುತ್ತಿಲ್ಲ ಎಂದಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ಬೆನ್ನಲ್ಲೇ ಕಾಂಗ್ರೆಸ್ ನತ್ತ ಸಿನ್ಹಾ ಒಲವು ಹೆಚ್ಚಾಗುತ್ತಿದೆ.