ಅಪಘಾತದಲ್ಲಿ ಗಾಯಗೊಂಡಿರುವ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡ ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಮೈಸೂರು : ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ನಟ ದರ್ಶನ್ ತೆರಳುತ್ತಿದ್ದ ಕಾರು ಬೆಳ್ಳಂಬೆಳಗ್ಗೆ ಅಪಘಾತಕ್ಕೀಡಾಗಿದೆ. ಈ ವೇಳೆ ದರ್ಶನ್ ಹಾಗೂ ನಟ ದೆವರಾಜ್ ಹಾಗೂ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರು ಗಾಯಗೊಂಡಿದ್ದಾರೆ. ತಡರಾತ್ರಿ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ವೇಳೆ ಮೈಸೂರಿನ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ.
ಮೂವರನ್ನು ಕೂಡ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ದರ್ಶನ್ ಅವರ ಕೈ ಮುರಿದಿದ್ದು, ಅವರಿಗೆ ಕೈ ಶಸ್ತ್ರ ಚಿಕಿತ್ಸೆ ನೆರವೆರಿಸಲಾಗಿದೆ. ಇನ್ನು ಪ್ರಜ್ವಲ್ ಹಾಗೂ ನಟ ದೇವರಾಜ್ ಅವರಿಗೂ ಕೂಡ ಇದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮೈಸೂರಿನಿಂದ ವಾಪಸಾಗುತ್ತಿದ್ದ ವೇಳೆ ದರ್ಶನ್ ಅವರೇ ಚಲಾಯಿಸಿಕೊಂಡು ಬರುತ್ತಿದ್ದ ಆಡಿಕಾರು ಅಪಘಾತಕ್ಕೆ ಈಡಾಗಿತ್ತು. ಈ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಅಪಘಾತದ ಬಳಿಕ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು.
ಎನ್ ಆರ್ ಠಾಣಾ ವ್ಯಾಪ್ತಿಯಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು, ಸೂಕ್ತ ರೀತಿಯ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇನ್ನು ಸ್ಥಳಕ್ಕೆ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದ್ದು, ಅಪಘಾತದ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಇನ್ನು ಆಸ್ಪತ್ರೆಗೆ ದರ್ಶನ್ ತಾಯಿ ಮೀನಾ ತೂಗುದೀಪ್, ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ದೇವರಾಜ್ ಕುಟುಂಬಸ್ಥರು ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
