ಸ್ವಾಮೀ ಅಗ್ನಿವೇಶ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

https://static.asianetnews.com/images/authors/b348a094-0bef-5801-a1f6-61e57071185f.jpg
First Published 18, Jul 2018, 7:57 AM IST
Activist Swami Agnivesh Attacked Allegedly By BJP Workers
Highlights

ಖ್ಯಾತ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಉದ್ರಿಕ್ತರು ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. 

ಪಾಕುರ್: ಖ್ಯಾತ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಉದ್ರಿಕ್ತರು ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. 78  ವರ್ಷದ ವೃದ್ಧನ ಮೇಲೆ  ನಡೆದಿರುವ ಈ ಅಮಾನವೀಯ ಕೃತ್ಯದ ಬಗ್ಗೆ ದೇಶ ದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ‘ನನ್ನ ಮೇಲೆ ದಾಳಿ ಮಾಡಿದ್ದು ಭಾರತೀಯ ಜನತಾ ಯುವ ಮೋರ್ಚಾ ಹಾಗೂ ಎಬಿವಿಪಿ ಕಾರ್ಯಕರ್ತರು’ ಎಂದು ಆಗ್ನಿವೇಶ್ ಆರೋಪಿಸಿದ್ದಾರೆ.  

ಇದರ ಬೆನ್ನಲ್ಲೇ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ರಘುಬರ ದಾಸ್ ಆದೇಶಿಸಿದ್ದಾರೆ. ಪಾಕೂರ್ ಜಿಲ್ಲೆಯ  ಲಿಟ್ಟಿಪಾರಾ ಎಂಬಲ್ಲಿ ಆದಿವಾಸಿಗಳ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅಗ್ನಿವೇಶ್ ಅವರು ಪತ್ರಿಕಾಗೋಷ್ಠಿ ನಡೆಸುವವರಿದ್ದರು. 

ಈ ವೇಳೆ ಎಬಿವಿಪಿ ಹಾಗೂ ಯುವ ಬಿಜೆಪಿ ಕಾರ್ಯಕರ್ತರು ಎನ್ನಲಾದ ಹಲವರು ಕಪ್ಪುಬಾವುಟ ಪ್ರದರ್ಶಿಸಿ ಘೇರಾವ್ ಹಾಕಿದರು. ಬಳಿಕ ಗುಂಪು ಅವರ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸುವ, ಕೆನ್ನೆಗೆ ಹೊಡೆವ ಹಾಗೂ ಕಾಲಿನಿಂದ ಒದೆಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. 

ಬಳಿಕ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಕ್ಸ್‌ರೇ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಗ್ನಿವೇಶ್, ‘ಬಿಜೆಪಿ ಯುವ ಮೋರ್ಚಾ ಹಾಗೂ ಎಬಿವಿಪಿ ಕಾರ್ಯಕರ್ತರು ನನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿದರು ಹಾಗೂ ನಾನು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದೇನೆ ಎಂದು ಆರೋಪಿಸಿದರು’ ಎಂದರು. ‘ಜಾರ್ಖಂಡ್ ಒಂದು ಶಾಂತ ರಾಜ್ಯ ಎಂದು ಭಾವಿಸಿದ್ದೆ.

ಆದರೆ ನನ್ನ ಭಾವನೆ ಸುಳ್ಳಾಗಿದೆ’ ಎಂದರು. ಅಗ್ನಿವೇಶ್ ಅವರು ಬಿಜೆಪಿ ಸರ್ಕಾರವು ಆದಿವಾಸಿ ಜನಾಂಗದ ಜಮೀನನ್ನು ಉದ್ಯಮಿಗಳಿಗೆ  ಹಂಚಿದೆ ಎಂದು ಆರೋಪಿಸಿದ್ದೇ ಈ ಘಟನೆಗೆ ಕಾರಣ ಎಂದೂ ಹೇಳಲಾಗಿದೆ. ಇದೇ ವೇಳೆ ಅಗ್ನಿವೇಶ್ ಕಾರ್ಯಕ್ರಮದ ಮಾಹಿತಿ ಇರಲಿಲ್ಲ ಎಂದು ಎಸ್‌ಪಿ ಶೈಲೇಂದ್ರ ಪ್ರಸಾದ್ ಹೇಳಿ ದ್ದಾರೆ. ಆದರೆ ಶೈಲೇಂದ್ರ ಆರೋಪವನ್ನು ಅಗ್ನಿವೇಶ್ ನಿರಾಕರಿಸಿದ್ದು, ‘ಈ ಬಗ್ಗೆ ಮೊದಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೆ. ಈ ಬಗ್ಗೆ ನನ್ನ ಆಪ್ತರ ಬಳಿ ದಾಖಲೆ ಇದೆ’ ಎಂದು ಹೇಳಿಕೊಂಡಿದ್ದಾರೆ. 

ಘಟನೆಯ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದ್ದು, ‘ಥಳಿತವನ್ನು ಸಮರ್ಥಿಸಲ್ಲ. ದಾಳಿಕೋರರು ಬಿಜೆಪಿಯವರು ಎಂದು ಅಗ್ನಿವೇಶ್ ಮಾಡದ ಆರೋಪದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದಿದೆ. ಆದರೆ ಸ್ವಾಮಿ ಅಗ್ನಿವೇಶ್ ಹಿಂದು ಧರ್ಮದ ಜತೆ ಚೆಲ್ಲಾಟವಾಡಬಾರದು ಎಂದು ಹೇಳಿದೆ.

loader