Asianet Suvarna News Asianet Suvarna News

ಶಿರೂರು ಶ್ರೀಗಳ ವಿರುದ್ಧ ಕ್ರಮ

ಇತ್ತೀಚೆಗೆ ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಅಷ್ಟಮಠಾಧೀಶರ ಮೇಲೆ ಹೊರಿಸಿರುವ ಗುರುತರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಉಡುಪಿಯ 6 ಮಠಾಧೀಶರು ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಹಸ್ಯ ಸಭೆಯೊಂದನ್ನು ನಡೆಸಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಶಿರೂರು ಶ್ರೀಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.

Action Against Shiroor Swamiji

ಉಡುಪಿ : ಇತ್ತೀಚೆಗೆ ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಅಷ್ಟಮಠಾಧೀಶರ ಮೇಲೆ ಹೊರಿಸಿರುವ ಗುರುತರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಉಡುಪಿಯ 6 ಮಠಾಧೀಶರು ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಹಸ್ಯ ಸಭೆಯೊಂದನ್ನು ನಡೆಸಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಶಿರೂರು ಶ್ರೀಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.

ಅನಾರೋಗ್ಯದ ನಿಮಿತ್ತ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿರುವ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ಗುರುವಾರ ರಾತ್ರಿ ತುರ್ತಾಗಿ ಉಡುಪಿಗೆ ಆಗಮಿಸಿ ಸಭೆ ನಡೆಸಿದರು. ಸಭೆಯಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಮಠದ ಹಿರಿಯ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮತ್ತು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು. ಶಿರೂರು ಶ್ರೀಗಳು ಮತ್ತು ವಿದೇಶದಲ್ಲಿರುವ ಪುತ್ತಿಗೆ ಮಠದ ಶ್ರೀಸುಗಣೇಂದ್ರ ತೀರ್ಥ ಸ್ವಾಮೀಜಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ತಡರಾತ್ರಿ ಸಭೆ: ಕೃಷ್ಣ ಮಠದ ನೂತನ ಮಧ್ವಾಂಗಣ ಸಭಾಭವನದಲ್ಲಿ ಮುಚ್ಚಿದ ಬಾಗಿಲ ಹಿಂದೆ ರಾತ್ರಿ 10.30ಕ್ಕೆ ಆರಂಭವಾದ ಸಭೆ ಮಧ್ಯರಾತ್ರಿ 12.30ರವರೆಗೆ 2 ಗಂಟೆಗಳಷ್ಟು ಕಾಲ ಸುದೀರ್ಘವಾಗಿ ನಡೆಯಿತು. ಎಂಟು ಮಂದಿ ಸ್ವಾಮೀಜಿ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಒಳಗೆ ಪ್ರವೇಶ ಇರಲಿಲ್ಲ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಸ್ವಾಮೀಜಿ ಅವರು ನಮ್ಮೆಲ್ಲರ ಬಗ್ಗೆ ಅರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ, ಶಿರೂರು ಶ್ರೀಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ನಿರ್ಣಯಿಸಿದ್ದೇವೆ, ಅದೇನೆಂಬುದನ್ನು ಸೂಕ್ತ ಸಂದರ್ಭದಲ್ಲಿ ಬಹಿರಂಗಗೊಳಿಸುತ್ತೇವೆ ಎಂದಿದ್ದಾರೆ. ಆದರೆ, ಈ ಸಭೆಯಲ್ಲಿ ಶಿರೂರು ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಸಿಲ್ಲ, ಅದು ಅವರ ವೈಯುಕ್ತಿಕ ವಿಚಾರ ಎಂದು ಹೇಳಿದ ಪೇಜಾವರ ಶ್ರೀ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದಾರೆ.

ಹಿನ್ನೆಲೆ ಏನು?: ಇತ್ತೀಚೆಗೆ ಶಿರೂರು ಸ್ವಾಮೀಜಿ ಅವರು, ‘ಉಡುಪಿಯ ಎಲ್ಲಾ ಅಷ್ಟ ಮಠಾಧೀಶರಿಗೆ ಮಕ್ಕಳಿದ್ದಾರೆ’ ಎಂದು ಹೇಳಿರುವುದಾಗಿ ಸುದ್ದಿವಾಹಿನಿ ಯೊಂದು ವಿಡಿಯೋ ಪ್ರಸಾರ ಮಾಡಿತ್ತು. ಆದರೆ ಈ ವಿಡಿಯೋ ನಕಲಿ ಎಂದು ಶಿರೂರು ಶ್ರೀಗಳು ನಂತರ ಹೇಳಿದ್ದರು. ಗುರುವಾರ ತಮ್ಮ ವಿರುದ್ಧ ನಡೆದ ಸಭೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶಿರೂರು ಸ್ವಾಮೀಜಿ ನಿರಾಕರಿಸಿದ್ದಾರೆ.

Follow Us:
Download App:
  • android
  • ios