ನವದೆಹಲಿ (ಸೆ. 30):  ಇದೇ ಮೊದಲ ಬಾರಿಗೆ ದೇಶಾದ್ಯಂತ ನೀತಿ ಆಯೋಗ ನಡೆಸಿರುವ ‘ಶಾಲಾ ಶಿಕ್ಷಣ ಗುಣಮಟ್ಟಸೂಚಂಕ್ಯ-2019’ ಸೋಮವಾರ ಬಿಡುಗಡೆಯಾಗಲಿದ್ದು, ರಾಜಸ್ಥಾನ ಹಾಗೂ ಕೇರಳ ಮೊದಲೆರಡು ಸ್ಥಾನಗಳನ್ನು ಬಾಚಿಕೊಂಡಿವೆ. ಗುಣ ಮಟ್ಟದ ಶಿಕ್ಷಣ ನೀಡುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ. ಉತ್ತಮ ಆಡಳಿತದಲ್ಲಿ ದೆಹಲಿ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಭಾರತದ ರಾಜ್ಯಗಳು ಗಮನಾರ್ಹ ಪ್ರಗತಿ ದಾಖಲಿಸವೆ ಎಂದು ನೀತಿ ಆಯೋಗದ ಮೂಲಗಳು ತಿಳಿಸಿವೆ.

2015-16ಕ್ಕೆ ಹೋಲಿಸಿದರೆ ಎಲ್ಲಾ ರಾಜ್ಯಗಳು ಗುಣಮಟ್ಟಹೆಚ್ಚಿಸಿಕೊಂಡಿದ್ದು, ರಾಜಸ್ಥಾನ ಹಾಗೂ ದಕ್ಷಿಣ ರಾಜ್ಯಗಳು ಗಮನಾರ್ಹ ಸಾಧನೆ ದಾಖಲಿಸಿವೆ. 20 ದೊಡ್ಡ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಕೊನೆ ಸ್ಥಾನ ದಾಖಲಿಸಿದ್ದು, ಜಾರ್ಖಂಡ್‌, ಬಿಹಾರ್‌, ಪಂಜಾಬ್‌ ಹಾಗೂ ಜಮ್ಮು ಕಾಶ್ಮೀರ ಒಟ್ಟಾರೆಯಾಗಿ ಕೊನೆಯ ಸ್ಥಾನದಲ್ಲಿವೆ. ಗೋವಾ ಹಾಗೂ ಈಶಾನ್ಯ ರಾಜ್ಯಗಳನ್ನು ಸಣ್ಣ ರಾಜ್ಯಗಳ ಪಟ್ಟಿಗೆ ಸೇರಿಸಲಾಗಿದ್ದು, ಪಶ್ಚಿಮ ಬಂಗಾಳ ಸಮೀಕ್ಷೆಯಿಂದ ಹೊರಗುಳಿದಿತ್ತು.

ಮಾನದಂಡ ಏನು?:

ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಮೂಲ ಸೌಕರ್ಯ, ಶಾಲಾ ಪುಸ್ತಕ ನೀಡುವಿಕೆ, ರಜಾ ಕಾಲದ ಕೋರ್ಸ್‌, ಅಲ್ಪಸಂಖ್ಯಾತ, ಗ್ರಾಮೀಣ ಹಾಗೂ ನಗರ ಪ್ರದೇಶಗಳ 3,5 ಹಾಗೂ 7ನೇ ತರಗತಿಯ ಫಲಿತಾಂಶಗಳ ಸರಾಸರಿ, ಆಡಳಿತದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಹಾಜರಾತಿ ಮತ್ತು ನಿಧಿ ಬಳಕೆಗೆ ತೆಗೆದುಕೊಂಡ ಸಮುಯವನ್ನು ಆಧರಿಸಿ ರಾರ‍ಯಂಕಿಂಗ್‌ ನೀಡಲಾಗಿದೆ.

ವಿಂಗಡನೆ ಹೀಗಿತ್ತು?:

ಸರ್ಕಾರದ ಚಿಂತಕರ ಚಾವಡಿ ಈ ಸಮೀಕ್ಷೆ ನಡೆಸಿದ್ದು, ಇದಕ್ಕಾಗಿ 20 ರಾಜ್ಯಗಳನ್ನು ದೊಡ್ಡ, 8 ರಾಜ್ಯಗಳನ್ನು ಸಣ್ಣ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗ ಮಾಡಲಾಗಿತ್ತು. ಫಲಿತಾಂಶ ಹಾಗೂ ಆಡಳಿತ ಮುಂತಾದ ಎರಡು ವಿಭಾಗಗಳಲ್ಲಿ ಮಾಡಲಾದ ಸಮೀಕ್ಷೆಯಲ್ಲಿ ಒಟ್ಟಾರೆ 30 ಸೂಚಕಗಳ ಉತ್ತರಗಳಿಂದ ಶೇ.50ರ ಸರಾಸರಿ ಮೂಲಕ ಫಲಿತಾಂಶ ನಿರ್ಧರಿಸಲಾಗಿದೆ. ಸೋಮವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ವರದಿ ಬಿಡುಗಡೆ ಮಾಡಲಿದೆ.