ರಸ್ತೆಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಮೈಲುಗಲ್ಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಮುಧೋಳದ ವಿರಕ್ತಮಠದ ಜಗದ್ಗುರು ಮೃತ್ಯುಂಜಯ ಶ್ರೀಗಳು (65) ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಧೋಳ-ಲೋಕಾಪುರ ರಸ್ತೆಯ ಬಳ್ಳೂರ ಪುನರ್ವಸತಿ ಕೇಂದ್ರ ಸಮೀಪ ಮಂಗಳವಾರ ನಡೆದಿದೆ.
ಮುಧೋಳ (ಜೂ.06): ರಸ್ತೆಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಮೈಲುಗಲ್ಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಮುಧೋಳದ ವಿರಕ್ತಮಠದ ಜಗದ್ಗುರು ಮೃತ್ಯುಂಜಯ ಶ್ರೀಗಳು (65) ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಧೋಳ-ಲೋಕಾಪುರ ರಸ್ತೆಯ ಬಳ್ಳೂರ ಪುನರ್ವಸತಿ ಕೇಂದ್ರ ಸಮೀಪ ಮಂಗಳವಾರ ನಡೆದಿದೆ.
ಘಟನೆಯಲ್ಲಿ ಚಾಲಕ ಅನ್ವೇಶ ನಿರಂಜನಪ್ರಭು ಪುರಾಣಿಕ (22) ಗಾಯಗೊಂಡಿದ್ದು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಕಾರ್ಯನಿಮಿತ್ತ ಹುಬ್ಬಳ್ಳಿಗೆ ಹೋಗಿದ್ದ ಶ್ರೀಗಳು ಮುಧೋಳಕ್ಕೆ ತಮ್ಮ ಕಾರಿನಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಬಳ್ಳೂರ ಸಮೀಪ ರಸ್ತೆಯಲ್ಲಿ ಹಾವು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋದಾಗ ಕಾರು ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮೈಲುಗಲ್ಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ. ಪರಿಣಾಮ ಮೃತ್ಯುಂಜಯ ಶ್ರೀಗಳು ತೀವ್ರ ಗಾಯಗೊಂಡಿದ್ದು ಅವರನ್ನು ತಕ್ಷಣ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ್ಯುಂಜಯ ಶ್ರೀಗಳು ಮೃತಪಟ್ಟ ಸುದ್ದಿ ತಿಳಿಯುತಿದ್ದಂತೆ ಅಪಾರ ಸಂಖ್ಯೆಯ ಭಕ್ತರು ಹಾಗೂ ಗಣ್ಯರು ವಿರಕ್ತಮಠಕ್ಕೆ ಧಾವಿಸಿ, ಕಂಬನಿ ಮಿಡಿದು ಅಂತಿಮ ದರ್ಶನ ಪಡೆದರು. ಬಳಿಕ ಗವಿಮಠದ ಆವರಣದಲ್ಲೇ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು.
