ಅಬುದಾಬಿ(ಮೇ.31): ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ಅಬುದಾಬಿಯ ಪ್ರತಿಷ್ಠಿತ ಅಡ್ ನಾಕ್ ಬಹು ಮಹಡಿ ಕಟ್ಟಡದಲ್ಲಿ ವರ್ಣರಂಜಿತ ದೀಪಗಳಿಂದ ಪ್ರಧಾನಿ ಮೋದಿ ಚಿತ್ರವನ್ನು ತೋರಿಸಲಾಗಿದೆ. 

ಈ ಕಟ್ಟಡದಲ್ಲಿ ಭಾರತ, ಯುಎಇ ಬಾವುಟ ಹಾಗೂ ಪ್ರಧಾನಿ ನರೇಂದ್ರ ಮೋದಿ , ಅಬುದಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಝಯದ್ ಅಲ್ ನಯ್ಯನ್ ಪರಸ್ಪರ ಕೈ ಹಿಡಿದಿರುವ ಪೋಟೋಗಳನ್ನು ತೋರಿಸಲಾಗಿದೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ ನಂತರ ಉಭಯ ರಾಷ್ಟ್ರಗಳ ನಡುವಣ ದ್ವೀಪಕ್ಷೀಯ ಒಪ್ಪಂದಗಳಲ್ಲಿ ನೈಜ ಬದಲಾವಣೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಇ ರಾಜ ಶೇಕ್ ಮೊಹಮ್ಮದ್ ಬಿನ್  ಝಯೇದ್ ನಡುವಿನ ಸ್ನೇಹ ಸಂಬಂಧ ವೃದ್ಧಿಗೊಂಡಿದೆ.  

ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರ ಪದ ಗ್ರಹಣ ಸಮಾರಂಭದ ವೇಳೆ ಯುಎಇ ಸರ್ಕಾರದಿಂದ ಅಡ್ ನಾಕ್ ಕಟ್ಟಡ ಅದ್ಭುತವಾಗಿ ಕಂಡುಬಂದಿತ್ತು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.