ನವದೆಹಲಿ[ಆ.08]: ಭಾರತೀಯ ವಾಯುಗಡಿ ಉಲ್ಲಂಘಿಸಿ ದಾಳಿ ನಡೆಸಲು ಯತ್ನಿಸಿದ್ದ ಪಾಕಿಸ್ತಾನದ ಎಫ್​ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಗೆ ಸರ್ಕಾರ ವೀರ ಚಕ್ರ ನೀಡಿ ಗೌರವಿಸುವ ಸಾಧ್ಯತೆಗಳಿವೆ. ಭಾರತೀಯ ವಾಯುಸೇನೆ ನಡೆಸಿದ್ದ ಏರ್ ಸ್ಟ್ರೈಕ್ ನಿಂದ ಕಂಗಾಲಾಗಿದ್ದ ಪಾಕಿಸ್ತಾನ ಫೆ. 27 ರಂದು ಭಾರತದ ವಾಯುಗಡಿ ಉಲ್ಲಂಘಿಸಿ ದಾಳಿ ನಡೆಸಲು ಯತ್ನಿಸಿತ್ತು. ಆದರೆ ಪಾಕಿಸ್ತಾನದ ಈ ದಾಳಿಯನ್ನು ಭಾರತೀಯ ವಾಯುಸೇನೆ ವಿಫಲಗೊಳಿಸಿತ್ತು. 

ಸುದ್ದಿ ಸಂಸ್ಥೆ IANS ಅನ್ವಯ ವಿಂಗ್ ಕಮಾಂಡರ್ ಅಭಿನಂದನ್  ಜತೆಗೆಬಾಲಾಕೋಟ್​ನಲ್ಲಿನ ಉಗ್ರರ ನೆಲೆಗಳ ಮೇಲೆ ಸದ್ದಿಲ್ಲದೆ ಏರ್ ಸ್ಟ್ರೈಕ್ ನಡೆಸಿ ಸುರಕ್ಷಿತವಾಗಿ ಮರಳಿದ್ದ ಮಿರಾಜ್​ 2000 ಯುದ್ಧ ವಿಮಾನಗಳ 5 ಪೈಲಟ್​ಗಳಿಗೆ ವಾಯು ಸೇನಾ ಪದಕ ಗೌರವ ಲಭಿಸುವ ಸಾಧ್ಯತೆಗಳಿವೆ.

ಭಾರತೀಯ ಸೇನಾ ಬಂಕರ್ ಗಳನ್ನು ಗುರಿಯಾಗಿಸಿ ದಾಳಿ ಮಾಡಲು ಪಾಕಿಸ್ತಾನದ 24 ಯುದ್ಧ ವಿಮಾನಗಳು ಸಜ್ಜಾಗಿದ್ದವು. ಆದರೆ ತಮ್ಮ ಮಿಗ್​ 21 ಬೈಸನ್​ ಯುದ್ಧವಿಮಾನದಲ್ಲಿ ಅವುಗಳನ್ನು ಬೆನ್ನಟ್ಟಿಕೊಂಡು ಹೋಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಎಫ್​ 16 ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದ್ದರು.

ಆದರೆ ತಾಂತ್ರಿಕ ದೋಷದಿಂದ ಯುದ್ಧ ವಿಮಾನ ಪತನಗೊಂಡಿತ್ತು. ಈ ವೇಳೆ ಅಭಿನಂದನ್ ವಿಮಾನದಿಂದ ಹಾರಿ ಬಚಾವಾಗಿದ್ದರಾದರೂ ಪಾಕ್​ ಆಕ್ರಮಿತ ಕಾಶ್ಮೀರದೊಳಗೆ ಇಳಿದಿದ್ದರಿಂದ, ಅಲ್ಲಿನ ಸೇನೆ ಅವರನ್ನು ಬಂಧಿಸಿತ್ತು. ಆದರೆ ಪಾಕಿಸ್ತಾನದ ಮೇಲೆ ಭಾರತ ಜಾಗತಿಕವಾಗಿ ಒತ್ತಡ ಹೇರಿದ್ದರಿಂದ ಅಭಿನಂದನ್​ ರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿತ್ತು.