ಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಕಪಿಲ್ ಮಿಶ್ರಾ ಪದೇಪದೇ ವಿನಂತಿ ಮಾಡಿಕೊಳ್ಳುತ್ತಿದ್ದುದು ಕೆಲ ಆಮ್ ಆದ್ಮಿ ಶಾಸಕರ ಕೋಪಕ್ಕೆ ಕಾರಣವಾಯಿತೆನ್ನಲಾಗಿದೆ. ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಕೂಡ ಮಿಶ್ರಾರನ್ನು ಸಭೆಯಿಂದ ಹೊರಹೋಗುವಂತೆ ಸೂಚಿಸಿದರು. ಮಿಶ್ರಾ ಕೇಳದೇಹೋದಾಗ ಶಾಸಕರ ಗುಂಪು ಹಾಗೂ ಸಿಬ್ಬಂದಿ ಸೇರಿಕೊಂಡು ಕಪಿಲ್ ಮಿಶ್ರಾರನ್ನು ಬಲವಂತವಾಗಿ ಸಭೆಯಿಂದ ಹೊರಹಾಕಿದರು.
ನವದೆಹಲಿ(ಮೇ 31): ಆರೇಳು ಆಮ್ ಆದ್ಮಿ ಮುಖಂಡರು ತಮ್ಮ ಮೇಲೆ ಹಲ್ಲೆ ಮಾಡಿದರೆಂದು ಉಚ್ಛಾಟಿತ ಆಪ್ ಮುಖಂಡ ಕಪಿಲ್ ಮಿಶ್ರಾ ದೂರಿದ್ದಾರೆ. ಜಿಎಸ್'ಟಿ ಬಗ್ಗೆ ಚರ್ಚಿಸಲು ಇಂದು ದಿಲ್ಲಿ ವಿಧಾನಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ಕಪಿಲ್ ಮಿಶ್ರಾ ಅವರನ್ನು ಬೇರೆ ಶಾಸಕರು ಮತ್ತು ವಿಧಾನಸಭೆ ಸಿಬ್ಬಂದಿ ಕೈಹಿಡಿದು ಎಳೆಯತ್ತಿರುವ ದೃಶ್ಯಗಳು ರೆಕಾರ್ಡ್ ಆಗಿವೆ. ಆದರೆ, ಕಪಿಲ್ ಮಿಶ್ರಾ ಮಾಡಿರುವ ಆರೋಪದ ಪ್ರಕಾರ, 5-7 ಆಪ್ ಶಾಸಕರು ಅವರ ಎದೆಯ ಮೇಲೆ ಗುದ್ದಿ ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ನಡೆಯುವಾಗ ಕ್ಯಾಮೆರಾವನ್ನು ಆಫ್ ಮಾಡಲಾಗಿತ್ತು ಎಂದೂ ಮಿಶ್ರಾ ಆರೋಪಿಸಿದ್ದಾರೆ.
ಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಕಪಿಲ್ ಮಿಶ್ರಾ ಪದೇಪದೇ ವಿನಂತಿ ಮಾಡಿಕೊಳ್ಳುತ್ತಿದ್ದುದು ಕೆಲ ಆಮ್ ಆದ್ಮಿ ಶಾಸಕರ ಕೋಪಕ್ಕೆ ಕಾರಣವಾಯಿತೆನ್ನಲಾಗಿದೆ. ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಕೂಡ ಮಿಶ್ರಾರನ್ನು ಸಭೆಯಿಂದ ಹೊರಹೋಗುವಂತೆ ಸೂಚಿಸಿದರು. ಮಿಶ್ರಾ ಕೇಳದೇಹೋದಾಗ ಶಾಸಕರ ಗುಂಪು ಹಾಗೂ ಸಿಬ್ಬಂದಿ ಸೇರಿಕೊಂಡು ಕಪಿಲ್ ಮಿಶ್ರಾರನ್ನು ಬಲವಂತವಾಗಿ ಸಭೆಯಿಂದ ಹೊರಹಾಕಿದರು.
"ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರದ ಕುರಿತು ತನಗೆ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಪತ್ರ ಬರೆದಿದ್ದೆ. ಆದರೆ, ನನ್ನ ಮೇಲೆ ಹಲ್ಲೆಯಾಗಿದೆ" ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. ಅವರ ಪ್ರಕಾರ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೇ ಹೇಳಿ ಈ ಕೃತ್ಯ ಎಸಗಿಸಿದ್ದಾರೆ.
ಈ ಘಟನೆಗೆ ಬಿಜೆಪಿ ಸಹಜವಾಗೇ ಖಾರವಾಗಿ ಪ್ರತಿಕ್ರಿಯಿಸಿದೆ. ಇದು ಆಮ್ ಆದ್ಮಿ ಪಕ್ಷದ ಹತಾಶೆಯನ್ನು ತೋರಿಸುತ್ತಿದೆ ಎಂದು ಬಿಜೆಪಿ ಹೇಳಿದೆ.