Asianet Suvarna News Asianet Suvarna News

ಅಮೀರ್'ಗೆ ಜಿಮ್ ಕಲಿಸಿದ್ದು ಯಾರು ಎಂದರೆ ನೀವು ಆಶ್ಚರ್ಯ ಪಡುತ್ತೀರಿ

ದಂಗಲ್ ಕುಸ್ತಿಯ ಅಖಾಡದಲ್ಲಿ ಅಮೀರ್ ಬಲಾಢ್ಯರಾಗಿ ತೊಡೆ ತಟ್ಟುತ್ತಿದ್ದಾರೆಂದರೆ ಅದಕ್ಕೆಲ್ಲ ಕಾರಣ ರಾಕೇಶ್ ಉಡಿಯಾರ್ ಎಂಬಾತ. ರಾಕೇಶ್ ಹಿಂದೆ ಮುಂಬೈನ ಲೋಕಲ್ ಟ್ರೈನಿನಲ್ಲಿ ...

Aamir Khans Fitness Trainer in Dangal Used to Sell Candies

ಆ ಇಬ್ಬರು ಖಾನ್‌ಗಳಿಗೂ 50 ವರ್ಷ. ಆದರೆ, ಅಮೀರ್ ಮತ್ತು ಸಲ್ಮಾನ್‌ರ ಏರು ವಯಸ್ಸಿನ ಏಯ್ಟ್‌ಪ್ಯಾಕ್ ಎಲ್ಲರಿಗೂ ಅಚ್ಚರಿ ತರುತ್ತದೆ. ಇವರ ಕಟ್ಟುಮಸ್ತಾದ ದೇಹ ಹುರಿಗೊಳ್ಳಲು ಕಾರಣ ಆಗಿರೋದು ರೇಲ್ವೆ ಸ್ಟೇಷನ್ನಿನಲ್ಲಿ ಐಸ್‌ಕ್ಯಾಂಡಿ ಮಾರುತ್ತಿದ್ದ ಒಬ್ಬ ತರುಣ!

ಹೌದು, ‘ದಂಗಲ್’ನ ಕುಸ್ತಿಯ ಅಖಾಡದಲ್ಲಿ ಅಮೀರ್ ಬಲಾಢ್ಯರಾಗಿ ತೊಡೆ ತಟ್ಟುತ್ತಿದ್ದಾರೆಂದರೆ ಅದಕ್ಕೆಲ್ಲ ಕಾರಣ ರಾಕೇಶ್ ಉಡಿಯಾರ್ ಎಂಬಾತ. ಮುಂಬೈನಲ್ಲಿ ಜಿಮ್ ನಡೆಸುವ ರಾಕೇಶ್, ‘ಪೀಕೆ’ ಸಿನಿಮಾದಿಂದಲೇ ಅಮೀರ್‌ಗೆ ಫಿಟ್ನೆಸ್ ಗೈಡ್ ಆಗಿದ್ದಾರೆ. ಮುಂಬೈನ ಕಾರ್ಟರ್ ರಸ್ತೆಯಲ್ಲಿ, ಸಮುದ್ರಕ್ಕೆ ಮುಖಮಾಡಿ ನಿಂತಿರುವ ಅಮೀರ್‌ಖಾನ್‌ರ ಅಪಾರ್ಟ್‌ಮೆಂಟ್‌ಗೆ ನಿತ್ಯ ಹೋಗಿ ಜಿಮ್ ಪಾಠ ಹೇಳುತ್ತಾರೆ. ಹಾಗೆಯೇ ‘ಸುಲ್ತಾನ್’ ಸಿನಿಮಾಕ್ಕಾಗಿ ಸಲ್ಮಾನ್‌ರನ್ನು ಖಡಕ್ಕಾಗಿ ರೆಡಿಮಾಡಿದ್ದೂ ಇದೇ ವ್ಯಕ್ತಿ. ಈಗಲೂ ಸಲ್ಮಾನ್‌ರ ಪರ್ಸನಲ್ ಟ್ರೈನರ್ ಕೂಡ ರಾಕೇಶ್!

ಸ್ಟಾರ್ ನಟರಿಗೆ ಫಿಟ್ನೆಸ್ ಸ್ಪರ್ಶ ನೀಡಿ ಸೂಪರ್‌ಮ್ಯಾನ್ ಮಾಡುವ ಈ ಮಾಂತ್ರಿಕನ ಹಿನ್ನೆಲೆ ಕೇಳಿದರೆ ನೀವೇ ಶಾಕ್ ಆಗ್ತೀರಿ. ಮುಂಬೈನ ಲೋಕಲ್ ಟ್ರೈನುಗಳಲ್ಲಿ ರಾಕೇಶ್ ಐಸ್‌ಕ್ಯಾಂಡಿ ಮಾರುತ್ತಿದ್ದರಂತೆ. ‘ನಾನು ಈ ಹಿಂದೆ ಜಿಮ್‌ನಲ್ಲಿ ಕಸ ಗುಡಿಸಿ, ನೆಲ ಒರೆಸುತ್ತಿದ್ದೆ. ಆದರೆ, ಈ ಕೆಲಸ ನನ್ನ ಹಿಂದಿನ ಕೆಲಸಕ್ಕಿಂತ ಉತ್ತಮವಾಗಿತ್ತು. ಆಗ ನಾನು ಅಂಬರ್‌ನಾಥ್ ಸ್ಟೇಶನ್ನಿನಿಂದ ದಾದರ್ ಸ್ಟೇಶನ್ ತನಕ ಹೋಗಿ ಐಸ್‌ಕ್ಯಾಂಡಿ ಮಾರುತ್ತಿದ್ದೆ. ಮುಂಬೈ ಕೋಸ್ಟಲ್ ಏರಿಯಾ. ಇಲ್ಲಿ ಸೆಖೆ ಹೆಚ್ಚು. ಮಳೆಗಾಲದಲ್ಲೂ ಐಸ್‌ಕ್ಯಾಂಡಿ ಖರ್ಚಾಗುತ್ತಿತ್ತು’ ಎನ್ನುತ್ತಾರೆ ರಾಕೇಶ್.

ಹಾಗಾದ್ರೆ ರಾಕೇಶ್ ಜಿಮ್ ಟ್ರೈನರ್ ಆಗಿದ್ದು ಹೇಗೆಂದು ನೀವು ಕೇಳಬಹುದು. 15 ವರ್ಷದ ಹಿಂದೆ ಇವರು ಜಿಮ್‌ನಲ್ಲಿ ಕಸ ಗುಡಿಸುವ ಕೆಲಸದಲ್ಲಿದ್ದಾಗ ಒಂದು ಘಟನೆ ನಡೆಯಿತು. ಅದೊಂದು ರಾತ್ರಿ ಜಿಮ್ ಭರ್ತಿ ಆಗಿದ್ದರಿಂದ ಒಬ್ಬ ಹುಡುಗ ತನಗೆ ಅವಕಾಶ ಸಿಗಲಿಲ್ಲವೆಂದು ನಿರಾಶೆಯಿಂದ ವಾಪಸ್ಸಾಗುತ್ತಿದ್ದ. ರಾಕೇಶ್ ಅವನನ್ನು ಕರೆದು, ಜಿಮ್‌ನ ಹೊರಭಾಗದ ಆವರಣದಲ್ಲಿ ಕೆಲವು ಫಿಟ್ನೆಸ್ ಟಿಪ್ಸ್ ಹೇಳಿಕೊಟ್ಟರು. ಅವನಿಗೆ ಇವರ ಜಿಮ್ ಪಾಠ ಬಹಳ ಹಿಡಿಸಿತು. ‘ನೀವೇಕೆ ಜಿಮ್ ಸ್ಥಾಪಿಸಿ, ನಮ್ಮಂಥವರಿಗೆ ಪಾಠ ಹೇಳಬಾರದು?’ ಎಂದು ಆತ ಕೇಳಿದನಂತೆ. ಅವನ ಬೆಂಬಲದಲ್ಲಿಯೇ ಇವರು ಮುನ್ನುಗ್ಗಿ, ಜಿಮ್ ಆರಂಭಿಸಿದರು. ರಾಕೇಶ್ ಬದುಕಿಗೆ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ.

ಕುಸ್ತಿಪಟು ಮಹಾವೀರ್ ಸಿಂಗ್ ಸೊಗಟ್ ಪಾತ್ರಕ್ಕಾಗಿ ಅಮೀರ್ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. 95 ಕೆಜಿ ಆಗಿದ್ದ ಅಮೀರ್ ಅವರನ್ನು ನೋಡಿ ಕುಟುಂಬದವರೇ ಗಾಬರಿ ಬಿದ್ದಿದ್ದರು. ‘ದಂಗಲ್‌ನಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ತೂಕದ ಅವಶ್ಯಕತೆ ಇತ್ತು. ಈಗ 95 ಕೆಜಿ ಆಗಿದ್ದೇನೆ. ಒಮ್ಮೆ ಕೆಳಗೆ ಕುಳಿತೆನೆಂದರೆ, ಕಾಲು ಮತ್ತು ಎದೆಯ ನಡುವೆ ಹೊಟ್ಟೆ ಆವರಿಸಿಕೊಳ್ಳುತ್ತದೆ. ಉಸಿರಾಡಲೂ ಕಷ್ಟವಾಗುತ್ತದೆ. ಸೊಗಟ್ ಪಾತ್ರ ಮುಗಿವ ತನಕ ಹೀಗೆಯೇ ಇರಬೇಕಾಗಿದೆ’ ಎಂದಿದ್ದರು. ಚಿತ್ರೀಕರಣ ಮುಗಿದ ಕೆಲವೇ ದಿನಗಳಲ್ಲಿ ಅಮೀರ್ ಅವರಿಗೆ ಮೂಲರೂಪವನ್ನು ದಯಪಾಲಿಸುವಲ್ಲೂ ರಾಕೇಶ್ ಯಶಸ್ವಿ ಆದರು.

ಟಾಕೀಸಿನಲ್ಲಿ ಅಮೀರ್ ಹಾಕುವ ಪಟ್ಟುಗಳನ್ನು ಕಂಡು ಶಿಳ್ಳೆ ಹೊಡೆಯುವ ಮುನ್ನ, ‘ಮಿ.ರ್ಪೆಕ್ಟ್’ನ ಫಿಟ್ನೆಸ್‌ಗೆ ಮರುಳಾಗುವ ಮುನ್ನ, ಈ ರಾಕೇಶ್‌ನನ್ನೂ ನೆನೆದರೆ ಆತನ ಶ್ರಮಕ್ಕೂ ಸಾರ್ಥಕತೆ ಸಿಕ್ಕೀತೇನೋ!

Follow Us:
Download App:
  • android
  • ios