ನವದೆಹಲಿ :  ಶಾಲೆಯಲ್ಲಿ ಅಡ್ಮಿಷನ್‌ ಪಡೆಯಲು ಆಧಾರ್‌ ಕಡ್ಡಾಯವಲ್ಲ ಎಂದು ಕೆಲವು ತಿಂಗಳ ಹಿಂದೆಯೇ ಆದೇಶ ಹೊರಡಿಸಲಾಗಿದ್ದರೂ, ಕೆಲವು ಶಿಕ್ಷಣ ಸಂಸ್ಥೆಗಳು ಆಧಾರ್‌ ಕಡ್ಡಾಯ ಮಾಡುತ್ತಿರುವುದನ್ನು ‘ಆಧಾರ್‌ ಪ್ರಾಧಿಕಾರ’ ಗಂಭೀರವಾಗಿ ಪರಿಗಣಿಸಿದೆ. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಅಡ್ಮಿಷನ್‌ (ಪ್ರವೇಶ) ವೇಳೆ ಆಧಾರ್‌ ಕೇಳಿದರೆ ಅದು ಸರ್ವೋಚ್ಚ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.

ನರ್ಸರಿ ಹಾಗೂ ಮೊದಲನೇ ತರಗತಿಯ ಪ್ರವೇಶಗಳು ಈಗ ದೇಶದ ವಿವಿಧ ಕಡೆ ಆರಂಭವಾಗಿದ್ದು, ಅನೇಕ ಕಡೆ ಮಗುವಿನ ಆಧಾರ್‌ ಕಾರ್ಡು ಕೊಡಿ ಎಂದು ಶಾಲೆಗಳು ಕೇಳುತ್ತಿರುವ ದೂರುಗಳು ಬರತೊಡಗಿವೆ. ಈ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆ ಜತೆ ಮಾತನಾಡಿದ ಆಧಾರ್‌ ಪ್ರಾಧಿಕಾರದ ಸಿಇಒ ಅಜಯ್‌ಭೂಷಣ್‌ ಪಾಂಡೆ, ‘ಶಾಲೆಗಳು ಆಧಾರ್‌ ಕೇಳುವುದು ಸರಿಯಲ್ಲ. ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿಲ್ಲ. ಶಾಲೆಗೆ ಪ್ರವೇಶ ನೀಡುವಾಗ ಆಧಾರ್‌ ತೆಗೆದುಕೊಂಡು ಬನ್ನಿ ಎಂದು ಷರತ್ತು ವಿಧಿಸುವಂತಿಲ್ಲ’ ಎಂದರು. ಒಂದು ವೇಳೆ ಆಧಾರ್‌ ಕೇಳಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದೂ ಅವರು ಹೇಳಿದರು.

ಶಾಲೆಗಳು ಆಧಾರ್‌ ಕೇಳದೇ ಮಕ್ಕಳಿಗೆ ಪ್ರವೇಶ ಕಲ್ಪಿಸಬೇಕು. ಶಾಲೆಗಳೇ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ಆಧಾರ್‌ ಕೊಡಿಸಲು ಅವಕಾಶವಿದೆ ಎಂದು ಪಾಂಡೆ ಸಲಹೆ ನೀಡಿದರು.