ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರೆ ನೀವು ಆಧಾರ್ ಹೊಂದಿರಲೇಬೇಕು. ಆಯುಷ್ಮಾನ್ ಭಾರತ್ ಯೋಜನೆಯಡಿ 2ನೇ ಬಾರಿ ಚಿಕಿತ್ಸೆ ಪಡೆದುಕೊಳ್ಳಲು ಆಧಾರ್ ಕಡ್ಡಾಯ ಮಾಡಲಾಗಿದೆ. 

ನವದೆಹಲಿ: ಹೊಸದಾಗಿ ಆರಂಭವಾಗಿರುವ ‘ಆಯುಷ್ಮಾನ್‌ ಭಾರತ-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯಡಿ ಮೊದಲ ಬಾರಿ ಚಿಕಿತ್ಸೆ ಪಡೆಯಲು ಆಧಾರ್‌ ಸಂಖ್ಯೆ ನೀಡುವ ಅಗತ್ಯವಿಲ್ಲ. 

ಆದರೆ 2ನೇ ಬಾರಿ ಚಿಕಿತ್ಸೆಗೆ ಹೋದರೆ ಆಧಾರ್‌ ಸಂಖ್ಯೆ ನೀಡಿಕೆ ಕಡ್ಡಾಯ. ಒಂದು ವೇಳೆ ಆಧಾರ್‌ ಇಲ್ಲದೇ ಹೋದರೆ, 12 ಅಂಕಿಯ ಆಧಾರ್‌ ಸಂಖ್ಯೆ ಪಡೆಯಲು ನೋಂದಣಿ ಮಾಡಿಸಿಕೊಂಡ ಕುರಿತಾದ ದಾಖಲೆ ಪತ್ರವನ್ನಾದರೂ ತೋರಿಸಬೇಕು. ಆಯುಷ್ಮಾನ್‌ ಭಾರತದ ಜಾರಿಯ ಹೊಣೆ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಿಇಒ ಇಂದೂ ಭೂಷಣ್‌ ಈ ವಿಷಯ ಖಚಿತಪಡಿಸಿದ್ದಾರೆ.

ಇತ್ತೀಚೆಗೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಆಧಾರ್‌ ಕಡ್ಡಾಯ ಸರಿ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಆಧಾರ್‌ ಕಡ್ಡಾಯವ ವಿಷಯವನ್ನು ಬಹಿರಂಗಪಡಿಸಲಾಗಿದೆ. 

‘2ನೇ ಬಾರಿ ಸವಲತ್ತು ಪಡೆಯಬೇಕೆಂದರೆ ಆಧಾರ್‌ ಅಥವಾ ಆಧಾರ್‌ಗೆ ನೋಂದಾಯಿಸಿದ ದೃಢೀಕರಣ ಪತ್ರ ಕಡ್ಡಾಯ. ಮೊದಲ ಸಾರಿ ಚಿಕಿತ್ಸೆ ಪಡೆಯುವವರು ಆಧಾರ್‌ ನೀಡಬಹುದು. ಇಲ್ಲದೇ ಹೊದರೆ ಚುನಾವಣಾ ಗುರುತು ಚೀಟಿಯಂತಹ ಯಾವುದಾದರೂ ಗುರುತು ಪತ್ರ ತೋರಿಸಬಹುದು’ ಎಂದು ಅವರು ಹೇಳಿದರು.