ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನು ಆಧಾರ್ ಇ – ಬೋರ್ಡಿಂಗ್

First Published 15, Feb 2018, 10:39 AM IST
Aadhaar E Boarding In Kempegowda Airport
Highlights

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಆಧಾರ್’ ಆಧಾರಿತ ಬಯೋಮೆಟ್ರಿಕ್ ಇ-ಬೋರ್ಡಿಂಗ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಕಾರ್ಯಕಾರಿ ನಿರ್ದೇಶಕ ಹರಿ ಮರರ್ ತಿಳಿಸಿದ್ದಾರೆ.

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಆಧಾರ್’ ಆಧಾರಿತ ಬಯೋಮೆಟ್ರಿಕ್ ಇ-ಬೋರ್ಡಿಂಗ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಕಾರ್ಯಕಾರಿ ನಿರ್ದೇಶಕ ಹರಿ ಮರರ್ ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ನಿಲ್ದಾಣದಲ್ಲಿ ಐದು ಕಡೆ ಪರಿಶೀಲಿಸಿದ ಬಳಿಕವೇ ಪ್ರಯಾಣಿಕರನ್ನು ವಿಮಾನ ಏರಲು ಅವಕಾಶ ನೀಡಲಾಗುತ್ತಿದೆ. 

ಈ ಪರಿಶೀಲನೆ ಪ್ರಕ್ರಿಯೆಗೆ ಕನಿಷ್ಠ 25 ನಿಮಿಷ ವ್ಯಯವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಯೋಮೆಟ್ರಿಕ್ ವ್ಯವಸ್ಥೆ ಇ-ಬೋರ್ಡಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಸಿದ್ಧತೆ ನಡೆಸುತ್ತಿದ್ದು, ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. ಈ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಕ್ಯಾಮೆರಾ ಮತ್ತು ಸ್ಕ್ಯಾನರ್ ಮೂಲಕ ವ್ಯಕ್ತಿಯ ಮುಖ ಚಹರೆ, ಕಣ್ಣು, ಬೆರಳಚ್ಚು ಪರಿಶೀಲಿಸಿದ ಬಳಿಕ ನೇರವಾಗಿ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು.

ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ದೇಶದಲ್ಲಿ ಈ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಕೆಐಎಎಲ್ ಭಾಜನವಾಗಲಿದೆ. ಅಂತೆಯೇ ಬಿಎಂಟಿಸಿ ವಾಯುವಜ್ರ ಬಸ್‌ಗಳಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಬಸ್‌ನಲ್ಲೇ ಬೋರ್ಡಿಂಗ್ ಪಾಸ್ ನೀಡಲು ಚಿಂತಿಸಲಾಗಿದೆ ಎಂದು ಹೇಳಿದರು.

2 ವರ್ಷದಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹಾರ: ನಿಲ್ದಾಣದ ಆವರಣದಲ್ಲಿ ಕಾರು ನಿಲುಗಡೆ ಒತ್ತಡವಿದ್ದು, ಸಮಸ್ಯೆ ಎದುರಾಗಿದೆ. ನಿಲ್ದಾಣ ಒಳಗಿರುವ ಹೋಟೆಲ್‌ಗಳಲ್ಲಿ ತಿಂಡಿಗೆ ದುಬಾರಿ ದರ ಪಾವತಿಸಬೇಕಿದೆ. ಈ ಸಮಸ್ಯೆಯನ್ನು ನಿವಾರಿಸಲು ಮಧ್ಯಮ ವರ್ಗದವರಿಗಾಗಿ ಹೋಟೆಲ್ ತೆರೆಯಬೇಕು ಎಂದು ಎಫ್‌ಕೆಸಿಸಿಐ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮರರ್, ಇದು ತಕ್ಷಣಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಕನಿಷ್ಠ ಎರಡು ವರ್ಷ ಕಾಲಾವಕಾಶಬೇಕು. ಮಾಸ್ಟರ್ ಪ್ಲಾನ್‌ನಲ್ಲಿ ಹೋಟೆಲ್ ಹಾಗೂ ಕಾರು ನಿಲುಗಡೆಗೆ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.

 ವಿಮಾನ ನಿಲ್ದಾಣದ ಮೂಲ ಸೌಕರ್ಯಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 12 ಸಾವಿರ ಕೋಟಿ ರೂ.ವೆಚ್ಚ ಮಾಡಲು ಯೋಜನೆ ರೂಪಿಸಲಾಗುತ್ತಿದೆ. 2017-18 ನೇ ಸಾಲಿನಲ್ಲಿ 26.71 ದಶಲಕ್ಷ ಪ್ರಯಾಣಿಕರು ಕೆಐಎಎಲ್‌ನಿಂದ ಪ್ರಯಾಣಿಸಿದ್ದಾರೆ. 2019 ರ ಅಕ್ಟೋಬರ್‌ಗೆ ಹೊರ ರನ್‌ವೇ ಪ್ರಾರಂಭಿಸಲಾಗುವುದು. ಇದೇ ಫೆ.21ರಿಂದ ಕೆಐಎಎಲ್-ಎಲೆಕ್ಟ್ರಾನಿಕ್ ಸಿಟಿ ನಡುವೆ ಹೆಲಿಟ್ಯಾಕ್ಸಿ ಸೇವೆ ಆರಂಭವಾಗಲಿದೆ.

loader