ಆಧಾರ್ ದೇಶದ ನಾಗರಿಕನ ಗೌರವದ ಸಂಕೇತ! ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್! ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ! ಕೇವಲ ಸರ್ಕಾರಿ ಕೆಲಸಗಳಿಗಾಗಿ ಮಾತ್ರ ಆಧಾರ್ ಮಾಹಿತಿ ಸಂಗ್ರಹ!ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿ ಸಂಗ್ರಹಿಸುವಂತಿಲ್ಲ
ನವದೆಹಲಿ (ಸೆ.26): ತೀವ್ರ ವಿವಾದಕ್ಕೆ ಕಾರಣವಾಗಿರುವ ಆಧಾರ್ ನಂಬರ್ ದೇಶದಲ್ಲಿ ಇರುವುದೋ, ರದ್ದಾಗುವುದೋ ಎಂಬ ಕುತೂಹಲಕ್ಕೆ ಬುಧವಾರ ತೆರೆ ಬಿದ್ದಿದ್ದು, ಆಧಾರ್ ಯೋಜನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೇಶದ ಜನರ ದೈನಂದಿನ ಜನಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಈ 12 ಅಂಕಿಯ ‘ಆಧಾರ್’ ತಂದಿದ್ದು, ಜನಸಾಮಾನ್ಯನ ನಾಗರಿಕ ಗುರುತು ಇದು. ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ.
ಈಗಾಗಲೇ ಈ ವಿಶಿಷ್ಟ ಗುರುತನ್ನು ಬಹುತೇಕ ಭಾರತೀಯರಿಗೆ ನೀಡಿಯಾಗಿದೆ. ಆಧಾರ್ ಪ್ರತಿಯೊಬ್ಬ ಭಾರತೀಯನ ಗೌರವದ ಸಂಕೇತ ಎಂದು ಪೀಠ ಹೇಳಿದೆ. ಆಧಾರ್ ಅತ್ಯಂತ ವಿಶಿಷ್ಟವಾಗಿದ್ದು, ಇದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದೂ ಪೀಠ ಹೇಳಿದೆ.
ಆಧಾರ್ ಮೇಲೆ ಕೇಂದ್ರ ಸರ್ಕಾರದ ಕಣ್ಗಾವಲು ಇದೆ ಎಂಬ ವಾದವನ್ನು ಒಪ್ಪದ ಸುಪ್ರೀಂ, ಆಧಾರ್ ಪ್ರಾಧಿಕಾರದಿಂದ ಗೌಪ್ಯತೆಯ ಭರವಸೆ ನೀಡಿದ ಮೇಲೆ ಈ ಕುರಿತು ವಿಚಾರ ಮಾಡುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದೆ.
ಇದೇ ವೇಳೆ ಆಧಾರ್ ಕಾಯ್ದೆಯ ಕಲಂ 33/2 ನ್ನು ರದ್ದುಗೊಳಿಸಿರುವ ಸುಪ್ರೀಂ, ಆಧಾರ್ ಕೇವಲ ಸರ್ಕಾರಿ ಕೆಲಸಗಳಿಗೆ ಮಾತ್ರ ಬಳಸಬೇಕೆ ಹೊರತು ಖಾಸಗಿ ಸಂಸ್ಥೆಗಳು ಹಣಕಾಸು ಉದ್ದೇಶಕ್ಕಾಗಿ ಆಧಾರ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಮೊಬೈಲ್ ಕಂಪನಿಗಳಿಗೂ ಅನ್ವಯವಾಗಲಿದೆ ಎಂದು ಸುಪ್ರೀಂ ಹೇಳಿದೆ.
ಇದೇ ವೇಳೆ ಐಟಿ ರಿಟರ್ನ್ಸ ಗೆ ಆಧಾರ್ ಕಡ್ಡಾಯ ಎಂದು ಹೇಳಿರುವ ಸುಪ್ರೀಂ, ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಶಾಲಾ ದಾಖಲಾತಿಗೆ ಆಧಾರ್ ಕಡ್ಡಾಯ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.
‘ಆಧಾರ್’ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ 31 ಅರ್ಜಿಗಳ ಗುಚ್ಛದ ವಿಚಾರಣೆ ನಡೆಸಿರುವ ನ್ಯಾಯಾಲಯದ ಸಾಂವಿಧಾನಿಕ ಪೀಠ, ಆಧಾರ್ ಪರ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ.
ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಪುಟ್ಟಸ್ವಾಮಿ ಮುಂದಾಳತ್ವದಲ್ಲಿ 27 ಅರ್ಜಿಗಳು ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದವು. ಆಧಾರನ್ನು ಸರ್ಕಾರದ ವಿವಿಧ ಪ್ರಯೋಜನ ಪಡೆಯಲು ಕಡ್ಡಾಯ ಮಾಡಿದ್ದನ್ನು ಅರ್ಜಿಗಳಲ್ಲಿ ವಿರೋಧಿಸಲಾಗಿತ್ತು. ಜತೆಗೆ ಆಧಾರ್‌ನ ದತ್ತಾಂಶಗಳನ್ನು ಹ್ಯಾಕ್ ಮಾಡಿದರೆ ಅದು ರಾಷ್ಟ್ರೀಯ ಭದ್ರತೆಗೆ ಅಪಾಯ ತರುತ್ತದೆ, ಎಂದೂ ವಾದಿಸಲಾಗಿತ್ತು.
ಖಾಸಗೀತನಕ್ಕೆ ಭಂಗ?:
ಖಾಸಗಿತನಕ್ಕೆ ಭಂಗ ಬರುತ್ತದೆ ಎಂದೂ ಅರ್ಜಿದಾರರು ವಾದಿಸಿದ್ದರು. ಆದರೆ ಸರ್ಕಾರಿ ಸೇವೆಗಳ ದುರುಪಯೋಗ ತಡೆದು, ಅರ್ಹ ಫಲಾನುಭವಿಗಳಿಗೆ ಸವಲತ್ತು ಲಭಿಸುವಂತಾಗಲು ಆಧಾರ್ ಅಗತ್ಯ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹಣ ಉಳಿತಾಯವಾಗಿ, ಹಣದ ಪೋಲು ತಪ್ಪಲಿದೆ ಎಂದು ಸರ್ಕಾರ ವಾದ ಮಂಡಿಸಿತ್ತು. ಈ ಅರ್ಜಿಗಳ ಗುಚ್ಛವನ್ನು ನ್ಯಾಯಾಲಯ 4 ತಿಂಗಳ ಅವಧಿಯಲ್ಲಿ ಸುದೀರ್ಘ 38 ದಿವಸಗಳ ಕಾಲ ವಿಚಾರಣೆ ನಡೆಸಿದೆ.
