ಆಧಾರ್’ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲು 5 ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ರಚಿಸುವುದಾಗಿ ಇಂದು ಸುಪ್ರೀಂ ಕೋರ್ಟ್ ಹೇಳಿದೆ. ಜನಪರ ಕಲ್ಯಾಣ ಯೋಜನೆಗಳನ್ನು ಪಡೆಯಲು ಸರ್ಕಾರವು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವ ಕುರಿತು ಈ ಪೀಠವು ನವೆಂಬರ್ ತಿಂಗಳಿನಲ್ಲಿ ವಿಚಾರಣೆಯನ್ನು ಆರಂಭಿಸಲಿದೆ.
ನವದೆಹಲಿ: ಆಧಾರ್’ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲು 5 ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ರಚಿಸುವುದಾಗಿ ಇಂದು ಸುಪ್ರೀಂ ಕೋರ್ಟ್ ಹೇಳಿದೆ. ಜನಪರ ಕಲ್ಯಾಣ ಯೋಜನೆಗಳನ್ನು ಪಡೆಯಲು ಸರ್ಕಾರವು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವ ಕುರಿತು ಈ ಪೀಠವು ನವೆಂಬರ್ ತಿಂಗಳಿನಲ್ಲಿ ವಿಚಾರಣೆಯನ್ನು ಆರಂಭಿಸಲಿದೆ.
ಈ ನಡುವೆ ಕೋರ್ಟ್’ನಲ್ಲಿ ಅಫಿಡಾವಿಟ್ ಸಲ್ಲಿಸಿರುವ ಸರ್ಕಾರವು ಆಧಾರ್ ಕಡ್ಡಾಯಗೊಳಿಸುವ ಕ್ರಮವನ್ನು ಸಮರ್ಥಿಸಿಕೊಂಡಿದೆ ಹಾಗೂ ಅದರ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ತಳ್ಳಿಹಾಕಿದೆ.
ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸುವಿಕೆಯನ್ನು ಪ್ರಶ್ನಿಸಿ ಪ.ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ.ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡಾ ಇಂದು ನಡೆದಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರವು ಸಂಸತ್ತಿನ ನಿರ್ಣಯವನ್ನು ಪ್ರಶ್ನಿಸುವ ಹಾಗಿಲ್ಲ, ಅರ್ಜಿಯು ಗಮನಾರ್ಹವಾಗಿದೆ, ಆದರೆ ರಾಜ್ಯವು ಕೇಂದ್ರದ ನಡೆಯನ್ನು ಪ್ರಶ್ನಿಸಬಹುದೇ ಎಂಬುವುದನ್ನು ಮೊದಲು ಮನವರಿಕೆ ಮಾಡಿ ಎಂದು ಕೋರ್ಟ್ ಪ.ಬಂಗಾಳ ಸರ್ಕಾರಕ್ಕೆ ಹೇಳಿದೆ.
ಕೇಂದ್ರದ ಕ್ರಮವನ್ನು ವ್ಯಕ್ತಿಗಳು ಪ್ರಶ್ನಿಸಬಹುದೇ ಹೊರತು ರಾಜ್ಯಗಳು ಪ್ರಶ್ನಿಸುವ ಹಾಗಿಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮಮತಾ ಬ್ಯಾನರ್ಜಿ ಖುದ್ದಾಗಿ ಬಂದು ಅರ್ಜಿ ಸಲ್ಲಿಸಲಿ, ನಾವಗ ಅದನ್ನು ಪರಿಗಣಿಸುತ್ತೇವೆ ಎಂದು ಕೋರ್ಟ್ ಹೇಳಿದೆ.
