ಮೃತನ ಶ್ರೀನಿವಾಸ್ ಕೈಯಲ್ಲಿ ಚುಚ್ಚು ಮದ್ದು ಪತ್ತೆಯಾಗಿದೆ. ಅದನ್ನು ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು(ಮಾ.01): ಲಾಡ್ಜ್'ವೊಂದರಲ್ಲಿ ಭಾವಿ ಪತ್ನಿ ಜತೆಗಿದ್ದ ಯುವಕನೋರ್ವ ವಿಷದ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ರಾತ್ರಿ ನಗರದ ಎಚ್'ಬಿಆರ್ ಲೇಔಟ್'ನಲ್ಲಿ ನಡೆದಿದೆ. ಬಾಣಸವಾಡಿ ಸಮೀಪದ ಸುಬ್ಬಯ್ಯನಪಾಳ್ಯದ ನಿವಾಸಿ ಶ್ರೀನಿವಾಸ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಎಚ್'ಬಿಆರ್ ಲೇಔಟ್'ನ ಯುಓಇ ಹೋಟೆಲ್ ಕೋಣೆಯಲ್ಲಿ ತನ್ನ ಭಾವಿ ಪತ್ನಿ ಜತೆ ತಂಗಿದ್ದ ಶ್ರೀನಿವಾಸ್, ರಾತ್ರಿ 1.30ರ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಹೋಟೆಲ್ ಸಿಬ್ಬಂದಿ ನೆರವು ಪಡೆದು ಆಕೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್ ಸುಬ್ಬಯ್ಯನಪಾಳ್ಯದಲ್ಲಿ ತನ್ನ ತಾಯಿ ಜತೆ ವಾಸವಾಗಿದ್ದ. ಬಿಕಾಂ ಪದವಿ ಮುಗಿಸಿದ ನಂತರ ಎಎಲ್'ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ ಆತನಿಗೆ, ಕೆಲ ದಿನಗಳ ಹಿಂದೆ ಸಂಬಂಧಿಕರ ಪುತ್ರಿಯೊಂದಿಗೆ ಏಪ್ರಿಲ್'ನಲ್ಲಿ ಮದುವೆ ನಿಶ್ಚಯವಾಗಿತ್ತು. ಮಂಗಳವಾರ ಸಂಬಂಧಿಕರ ಗೃಹಪ್ರವೇಶಕ್ಕೆ ಭಾವಿ ಪತ್ನಿ ಜತೆ ಹೋಗಿದ್ದ ಶ್ರೀನಿವಾಸ್, ರಾತ್ರಿ ಮನೆಗೆ ತೆರಳದೆ ಆಕೆಯೊಂದಿಗೆ ಹೋಟೆಲ್'ನಲ್ಲೇ ತಂಗಿದ್ದರು. ಸಂಜೆ 7ರ ವೇಳೆಗೆ ಹೋಟೆಲ್ ಕೋಣೆಯಲ್ಲಿ ಭಾವಿ ಪತ್ನಿ ಜತೆ ಮಾತನಾಡುತ್ತಿದ್ದ ಶ್ರೀನಿವಾಸ್, ನಂತರ ಸ್ನೇಹಿತರ ಭೇಟಿ ಮಾಡಿ ಬರುವುದಾಗಿ ಹೇಳಿ ಹೋಟೆಲ್'ನಿಂದ ಹೊರ ಬಂದಿದ್ದಾನೆ.
ಆತ ಹೋಟೆಲ್‌ಗೆ ಮರಳುವ ವೇಳೆಗೆ ಭಾವಿ ಪತ್ನಿ ನಿದ್ರೆಗೆ ಜಾರಿದ್ದರು. ಇತ್ತ ಕೊಠಡಿಗೆ ಮರಳಿದ ಶ್ರೀನಿವಾಸ್ ಮದ್ಯ ಸೇವಿಸಿದ್ದಾನೆ. ಈ ವೇಳೆ ಎಚ್ಚರಗೊಂಡ ಭಾವಿ ಪತ್ನಿ ಮದ್ಯ ಸೇವನೆಗೆ ಆಕ್ಷೇಪಿಸಿದ್ದು, ಪರಸ್ಪರ ಮಾತಿನ ಚಕಮಕಿ ನಡೆದಿದೆ. ಬಳಿಕ ಕೋಪಗೊಂಡ ಆಕೆ ಮತ್ತೆ ನಿದ್ರೆಗೆ ಜಾರಿದ್ದಾರೆ.
ಮಧ್ಯಾಹ್ನ ರಾತ್ರಿ 1.30ರಲ್ಲಿ ಮತ್ತೆ ಅವರಿಗೆ ಎಚ್ಚರವಾದಾಗ ಶ್ರೀನಿವಾಸ್ ಅರೆ ಪ್ರಜ್ಞಾವಸ್ಥೆಯಲ್ಲಿದದ್ದು ಕಂಡು ಬಂದಿದೆ. ಆಗ ಆತಂಕಗೊಂಡ ಆಕೆ, ಭಯದಿಂದ ಚೀರಿದ್ದಾರೆ. ಈ ಕೂಗಾಟ ಕೇಳಿ ಹೋಟೆಲ್ ಸಿಬ್ಬಂದಿ ಧಾವಿಸಿದ್ದಾರೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಶ್ರೀನಿವಾಸ್ ಮೃತಪಟ್ಟಿದ್ದ ಎಂದಿದ್ದಾರೆ.
ಮೃತನ ಶ್ರೀನಿವಾಸ್ ಕೈಯಲ್ಲಿ ಚುಚ್ಚು ಮದ್ದು ಪತ್ತೆಯಾಗಿದೆ. ಅದನ್ನು ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
