Asianet Suvarna News Asianet Suvarna News

ಅಮ್ಮ ನಾ ಗೇ ಎಂದ ಮಗ: ‘ಹಿಂದೆ ನಿಂತ’ ಅಪ್ಪ!

ಸಲಿಂಗಿ ವಿಷಯವನ್ನು ಪೋಷಕರ ಮುಂದೆ ಹೇಳಿದ ಮಗ! ಮಗನ ಬೆಂಬಲಕ್ಕೆ ಗಟ್ಟಿಯಾಗಿ ನಿಂತ ಪೋಷಕರು! ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಕುಣಿದು ಕುಪ್ಪಳಿದ ಪೋಷಕರು! ಮಗನ ಭವಿಷ್ಯ, ಜೀವನವೇ ಮುಖ್ಯ ಎಂದ ಪೋಷಕರು   

A Parents supported their Gay son to pursue his life as he wants
Author
Bengaluru, First Published Sep 16, 2018, 1:39 PM IST

ಭೋಪಾಲ್(ಸೆ.16): ‘ಅಪ್ಪ, ಅಮ್ಮ ನಾನೊಬ್ಬ ಸಲಿಂಗಿ..’ ಹೀಗೆಂದು ಪುತ್ರನೋರ್ವ ತನ್ನ ಪೋಷಕರೆದುರು ಯಾವ ಭಯ, ಮುಜುಗರವಿಲ್ಲದೇ ಹೇಳಿದ. ಇದನ್ನು ಕೇಳಿದ ಪೋಷಕರು ಕೆಲ ಹೊತ್ತು ದಂಗಾದರೂ, ಮಗನ ಭವಿಷ್ಯ, ಆತನ ಜೀವನವೇ ತಮಗೆ ಮುಖ್ಯ ಎಂದು ಅರಿತು ಆತನ ಬೆಂಬಲಕ್ಕೆ ನಿಂತರು.

ಹೌದು, ಇಂತದ್ದೊಂದು ಕ್ರಾಂತಿಕಾರಿ ಮನೋಭಾವವನ್ನು ಪ್ರದರ್ಶಿಸಿದ ಕುಟುಂಬ ಇರೋದು ಮಧ್ಯಪ್ರದೇಶದ ಭೋಪಾಲ್ ನಲ್ಲಿ. ತಮ್ಮ ಮಗ ಸಲಿಂಗಿ ಎಂದರಿತ ಈ ಪೋಷಕರು ಆತನ ಜೊತೆ ಗಟ್ಟಿಯಾಗಿ ನಿಂತಿದ್ದಲ್ಲದೇ, ಇತ್ತೀಚಿಗೆ ಸುಪ್ರೀಂ ಕೋರ್ಟ್ ಸಲಿಂಗಕಾಮ ಕುರಿತ  377ನೇ ವಿಧಿಯನ್ನು ರದ್ದುಗೊಳಿಸಿದಾಗ ಸಂಭ್ರಮಪಟ್ಟಿದ್ದರು.

ವೈದ್ಯಕೀಯ ವಿದ್ಯಾರ್ಥಿ ರಾಹುಲ್ ಚೌಹಾಣ್ ಕಳೆದ ಕೆಲ ವರ್ಷಗಳ ಹಿಂದೆ ತನ್ನ ತಂದೆ-ತಾಯಿಗಳಲ್ಲಿ ತಾನೊಬ್ಬ ಸಲಿಂಗಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದ. ಇದನ್ನು ಕೇಳಿ ಪೋಷಕರಿಗೆ ಒಂದು ಕ್ಷಣ ಶಾಕ್ ಆಗಿದ್ದಂತೂ ನಿಜ.

ಆದರೆ ತಮ್ಮ ಮಗನ ಸಂತೋಷವೇ ಮುಖ್ಯವೆಂದು ಭಾವಿಸಿದ ತಂದೆ ಸುರೇಶ್ ಚಂದ್ರ ಮತ್ತು ತಾಯಿ ರಾಮಕನ್ಯಾ, ಮಗನ ಬೆಂಬಲಕ್ಕೆ ನಿಂತರು. ಉಜ್ಜಯನಿ ಸಮೀಪದ ಗ್ರಾಮದವೊಂದರ ನಿವಾಸಿಗಳಾದ ರಾಹುಲ್ ಕುಟುಂಬ, ಇತ್ತೀಚಿಗಿನ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಲ್ಲದೇ ಸಂಭ್ರಮಾಚರಣೆಯಲ್ಲೂ ಪಾಲ್ಗೊಂಡಿತ್ತು.

‘ಇದು ದೀರ್ಘ ಮತ್ತು ಕಠಿಣ ಪಯಣವಾಗಿತ್ತು. ಏರಿಳಿತ, ಕಣ್ಣೀರು ಮತ್ತು ಖಿನ್ನತೆಯಿಂದ ತುಂಬಿತ್ತು. ನನ್ನ ಬಗ್ಗೆ ತಿಳಿದ ಮೇಲೂ ಹೆತ್ತವರು ನನ್ನನ್ನು ಸ್ವೀಕರಿಸಿದ ದಿನ ನನ್ನ ಬದುಕಿನ ಅತ್ಯಂತ ಸಂತೋಷದ ದಿನವಾಗಿತ್ತು.

ಭೋಪಾಲ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ನನ್ನ ಪೋಷಕರು ಪಾಲ್ಗೊಂಡಿದ್ದು, ನನಗೆ ಆನೆ ಬಲ ತಂದು ಕೊಟ್ಟಿದೆ. ವಿದ್ಯಾವಂತರು ಸಹ ನಮ್ಮ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದನ್ನು ನೋಡಿ ನಮ್ಮ ಪೋಷಕರು ನಿರಾಳರಾದರು’ ಎನ್ನುತ್ತಾನೆ ರಾಹುಲ್.

Follow Us:
Download App:
  • android
  • ios