ಬಾವಿಗೆ ಬಿದ್ದಿದ್ದ ಜೋಡಿ ಹೆಬ್ಬಾವುಗಳ ರಕ್ಷಣೆ
ಬಾವಿಯೊಳಗೆ ಹಾವು ಗಮನಿಸಿದ ಸ್ಥಳೀಯರು, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದಾರೆ. ಇಂದು ಉರಗತಜ್ಞ ಗುರುರಾಜ ಸನಿಲ್ ಕಾರ್ಯಾಚರಣೆ ನಡೆಸಿ ಎರಡೂ ಹಾವುಗಳನ್ನು ರಕ್ಷಿಸಿದ್ದಾರೆ.
ಉಡುಪಿ (ಫೆ,22): ಬಾವಿಗೆ ಬಿದ್ದಿದ್ದ ಪ್ರೇಮಿಗಳನ್ನು ಉಡುಪಿಯಲ್ಲಿ ರಕ್ಷಿಸಲಾಗಿದೆ. ಅವರದ್ದು ಅಂತಿಂಥಾ ಪ್ರೇಮವಲ್ಲ. ಬಾವಿಗೆ ಬಿದ್ದು ಎರಡು ತಿಂಗಳಾಗಿತ್ತು. ಅಬ್ಬಾ ಎರಡು ತಿಂಗಳು ಬಾವಿಯಲ್ಲಿ ಬದುಕಿರ್ತಾರಾ ಅನ್ನೋ ಸಂಶಯವೇ. ಹೌದು ಉಡುಪಿಯ ಉಪ್ಪೂರು ಬಳಿ ಜೋಡಿ ಹೆಬ್ಬಾವುಗಳನ್ನು ರಕ್ಷಿಸಲಾಗಿದೆ.
ಒಂದು ಗಂಡು ಇನ್ನೊಂದು ಹೆಣ್ಣು. ಹೆಬ್ಬಾವು ಸಂತತಿಗೆ ಜನವರಿಯಿಂದ ಮಾರ್ಚ್’ವರೆಗೆ ಮಿಲನ ಕಾಲ. ಮಿಲನದ ವೇಳೆ ಈ ಜೋಡಿ ಹಾವುಗಳು ನೀರಿಲ್ಲದ ಬಾವಿಗೆ ಬಿದ್ದಿತ್ತು. ನಿರ್ಜನ ಪ್ರದೇಶದ ಬಾವಿ ಸೇರಿ ಎರಡು ತಿಂಗಳು ಕಳೆದಿತ್ತು.
ಬಾವಿಯೊಳಗೆ ಹಾವು ಗಮನಿಸಿದ ಸ್ಥಳೀಯರು, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದಾರೆ. ಇಂದು ಉರಗತಜ್ಞ ಗುರುರಾಜ ಸನಿಲ್ ಕಾರ್ಯಾಚರಣೆ ನಡೆಸಿ ಎರಡೂ ಹಾವುಗಳನ್ನು ರಕ್ಷಿಸಿದ್ದಾರೆ.
ಒಂದು ಹಾವು ಬಾವಿಯ ನಡುವೆ ಬಿದ್ದಿದ್ದರೆ, ಇನ್ನೊಂದು ಬಿಲದೊಳಗೆ ಅವಿತು ಕುಳಿತಿತ್ತು. ಸನಿಲ್ ಚಾಕಚಕ್ಯತೆಯಿಂದ ಹಾವುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇವೆರಡನ್ನೂ ಕುದುರೆಮುಖ ಅಭಯಾರಣ್ಯಕ್ಕೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ..