ನವದೆಹಲಿ[ಆ.11]: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸಂಸತ್ತಿಗೆ ಪರ್ಯಾಯವಾಗಿ ನೂತನ ಸಂಸತ್‌ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬಹುದಿನಗಳ ಬೇಡಿಕೆ ಪರಿಗಣನೆಯಲ್ಲಿದೆ. ಈ ಬಗ್ಗೆ ಅಂತಿಮ ನಿರ್ಧಾರವಷ್ಟೇ ಬಾಕಿಯಿದೆ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಹೇಳಿದ್ದಾರೆ. ಜೊತೆಗೆ ಹಾಲಿ ಸಂಸತ್ತಿನ ಕಟ್ಟಡವನ್ನು ನವೀಕರಣಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಬಿರ್ಲಾ ಅವರು, ‘ಪ್ರಸ್ತುತ ಇರುವ ಸಂಸತ್ತಿನ ಕಟ್ಟಡಕ್ಕೆ ಪರ್ಯಾಯವಾಗಿ ಮತ್ತೊಂದು ಸಂಸತ್ತಿನ ಕಟ್ಟಡ ಅಗತ್ಯವಿದೆ ಎಂಬ ಭಾವನೆಯಿದೆ. ಈ ಕುರಿತಾಗಿ ಹಲವು ಕ್ಷೇತ್ರಗಳ ಜನರಿಂದ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಸದರನ್ನೊಳಗೊಂಡಂತೆ ಹಲವು ಸಮಿತಿಗಳನ್ನು ರಚನೆ ಮಾಡಲಾಗಿತ್ತು’ ಎಂದು ಹೇಳಿದರು.

ಬ್ರಿಟಿಷರ ಕಾಲದಲ್ಲಿ ನಿರ್ಮಾಣ:

ಹಾಲಿ ಸಂಸತ್ತಿನ ಕಟ್ಟಡವು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದೆ. ಎಡ್ವಿನ್‌ ಲ್ಯೂಟನ್ಸ್‌ ಹಾಗೂ ಹರ್ಬರ್ಟ್‌ ಬಕೆರ್‌ ಅವರು ಈ ಕಟ್ಟಡದ ಯೋಜನೆ ಹಾಗೂ ನಿರ್ಮಾಣದ ರೂವಾರಿಗಳು. ಸಂಸತ್ತಿನ ಕಾಮಗಾರಿ ಆರಂಭವಾಗಿ 6 ವರ್ಷಗಳ ಕಾಲದ ಬಳಿಕ ಅಂತಿಮವಾಗಿ 1927 ಜ.18ರಂದು ಅಂದಿನ ವೈಸ್‌ರಾಯ್‌ ಹಾಗೂ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಇರ್ವಿನ್‌ ಅವರು ಉದ್ಘಾಟಿಸಿದ್ದರು. ಅಂದಿನ ಕಾಲದಲ್ಲಿ ಈ ಭವ್ಯ ಕಟ್ಟಡದ ನಿರ್ಮಾಣಕ್ಕಾಗಿ ಸುಮಾರು 80.3 ಲಕ್ಷ ರು.(1,20,000 ಅಮೆರಿಕ ಡಾಲರ್‌) ವೆಚ್ಚವಾಗಿತ್ತು. 6 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಈ ಕಟ್ಟಡವು ಲೋಕಸಭೆ, ರಾಜ್ಯಸಭೆ ಹಾಗೂ ಗ್ರಂಥಾಲಯದ ಹಾಲ್‌ ಅನ್ನು ಒಳಗೊಂಡಿರುವ ಸೆಂಟ್ರಲ್‌ ಹಾಲ್‌ ಒಳಗೊಂಡಿದೆ.

ಹೊಸ ಸಂಸತ್ತಿನ ಪ್ರಸ್ತಾಪ ಯಾವಾಗ ಮತ್ತು ಏಕೆ ಮುನ್ನೆಲೆಗೆ ಬಂತು:

ದೇಶದ ಆರ್ಥಿಕ ತಜ್ಞ ಡಾ. ಮನಮೋಹನ್‌ ಸಿಂಗ್‌ ಅವರ ನೇತೃತ್ವದಲ್ಲಿ ರಚನೆಯಾದ ಯುಪಿಎ 2ರ ಅವಧಿಯಲ್ಲಿ ನೂತನ ಸಂಸತ್ತು ನಿರ್ಮಾಣ ಮಾಡಬೇಕೆಂಬ ಕೂಗು ಎದ್ದಿತ್ತು. ಇದಕ್ಕಾಗಿ ಆಗಿನ ಸ್ಪೀಕರ್‌ ಮೀರಾ ಕುಮಾರ್‌ ಅವರು ಸಮಿತಿಯೊಂದನ್ನು ರಚಿಸಿದರು. ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದ ಹಾಗೂ 85 ವರ್ಷಗಳ ಕಾಲದ ದೀರ್ಘಾಕಾಲೀನವಾದ ಸಂಸತ್ತಿನ ಕಟ್ಟಡದಲ್ಲಿ ಸಂಸದರು ಮತ್ತು ಅವರ ಅಧಿಕಾರಿಗಳಿಗೆ ಅಗತ್ಯವಿರುವಷ್ಟುಸ್ಥಳದ ಅವಕಾಶ ಲಭ್ಯವಾಗುತ್ತಿಲ್ಲ. ಅಲ್ಲದೆ, ಐತಿಹಾಸಿಕ ಪಾರಂಪರೆ ಹೊಂದಿದ ಈ ಕಟ್ಟಡವನ್ನು ರಕ್ಷಣೆ ಮಾಡುವುದು ಸರ್ಕಾರದ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಸಂಸತ್ತಿನ ಕಟ್ಟಡ ನಿರ್ಮಾಣ ಅನಿವಾರ್ಯವಾಗಿದೆ.