ಸಾಗರ: ನಾಯಿ ತನ್ನ ನಿಯತ್ತನ್ನು ಸಾಕಷ್ಟು ಬಾರಿ ಜಗಜ್ಜಾಹೀರಗೊಳಿಸಿದೆ. ಈ ಶ್ವಾನದ ನಿಯತ್ತನ್ನು ಮೀರಿಸುವ ಪ್ರಾಣಿ ಮತ್ತೊಂದಿಲ್ಲ. ಇದೀಗ ಮತ್ತೊಮ್ಮೆ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದು, ಅತ್ಯಾಚಾರಕ್ಕೊಳಗಾಗುತ್ತಿದ್ದ ಬಾಲಕಿಯನ್ನು ನಾಯಿ ರಕ್ಷಿಸಿದೆ.

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲು ಮೂವರು ದುರುಳಲು ಯತ್ನಿಸಿದ್ದರು. ಆ ಸಂದರ್ಭದಲ್ಲಿ ಸಹಾಯ ಕೋರಿ ಬಾಲಕಿ ಕೂಗಿ ಕೊಂಡಿದ್ದಾಳೆ. ಆದರೆ, ಆ ನಿರ್ಜನ ಪ್ರದೇಶದಲ್ಲಿ ಯಾರಿಗೂ ಈ ಬಾಲೆಯ ಆರ್ತನಾದ ಕೇಳಿರಲೇ ಇಲ್ಲ. ಆಮೇಲೆ ತಾನು ಪ್ರೀತಿಯಿಂದ ಸಾಕಿರುವ ನಾಯಿಯನ್ನೂ ಕೂಗಿದ್ದಾಳೆ. ತಕ್ಷಣವೇ ನೆರವಿಗೆ ಧಾವಿಸಿದ ಈ ನಾಯಿ ಆರೋಪಿಗಳನ್ನು ಬೆದರಿಸಿ, ಓಡಿಸಿದೆ. ಮಗುವೊಂದು ಅತ್ಯಂತ ಹೇಯ ಕೃತ್ಯಕ್ಕೆ ಬಲಿಯಾಗುವುದನ್ನು ಈ ನಾಯಿ ತಪ್ಪಿಸಿದೆ.

ಅತ್ಯಾಚಾರ ದೋಷಿಗಳಿಗೆ ಗಲ್ಲು ವಿಧಿಸುತ್ತಿದ್ದರೂ, ಅತ್ಯಾಚಾರದಂಥ ಕೃತ್ಯಗಳು ನಡೆಯುತ್ತಲೇ ಇವೆ. ಮಧ್ಯ ಪ್ರದೇಶದ ಮೋತಿನಗರ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ದುರ್ಘಟನೆ ನಡೆದಿದ್ದು, ಜಾನುವಾರುಗಳಿಗೆ ಮೇವಿಡುವ ಕೊಠಡಿಗೆ ಬಾಲಕಿಯನ್ನು ಎಳೆದೊಯ್ದು, ಅತ್ಯಾಚಾರವೆಸಗಲು ದುಷ್ಕರ್ಮಿಗಳು ಯತ್ನಿಸಿದ್ದರು.

ಅತ್ಯಾಚಾರ ಆರೋಪಿಗಳನ್ನು ನಾಯಿ ಕಚ್ಚಿದ್ದು, ಅವರು ಸ್ಥಳದಿಂದ ಹೆದರಿ ಕಾಲ್ಕಿತ್ತಿದ್ದಾರೆ. ನಾಯಿಯ ಕೂಗಿಗೆ ತಕ್ಷಣವೇ ಎಲ್ಲರೂ  ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರೋಪಿಗಳ ವಿರುದ್ಧ ಐಪಿಸಿ 376 ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ.