ಶೀಘ್ರದಲ್ಲೇ ಮಂಜು ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ವಾಸ್ತವವಾಗಿ ಮಂಜು ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಸಿದ್ಧತೆಯಲ್ಲಿದ್ದರು.

ಬೆಂಗಳೂರು(ಜು.27): ರಾಮನಗರ ಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರದ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಪರ್ಯಾಯವಾಗಿ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ತಂತ್ರ ಕಾರ್ಯರೂಪಕ್ಕೆ ಬರತೊಡಗಿದೆ.

ಬುಧವಾರ ದೇವೇಗೌಡರು ಕಾಂಗ್ರೆಸ್ಸಿನ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜು ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ಉಪಸ್ಥಿತರಿದ್ದರು. ಶೀಘ್ರದಲ್ಲೇ ಮಂಜು ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ.

ವಾಸ್ತವವಾಗಿ ಮಂಜು ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಸಿದ್ಧತೆಯಲ್ಲಿದ್ದರು. ಆದರೆ, ಅಲ್ಲಿನ ಜೆಡಿಎಸ್ ಬಂಡಾಯ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್ಸಿಗೆ ವಲಸೆ ಬರುವುದು ಪಕ್ಕಾ ಆಗುತ್ತಿರುವಂತೆಯೇ ಜೆಡಿಎಸ್ ಕಡೆಗೆ ಹೆಜ್ಜೆ ಹಾಕಲು ನಿರ್ಧರಿಸಿದರು. ಇದೇ ವೇಳೆ ಬಾಲಕೃಷ್ಣ ಅವರಿಗೆ ಸಮರ್ಥ ಎದುರಾಳಿ ನಿಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಜೆಡಿಎಸ್ ನಾಯಕರು ಮಂಜು ಅವರನ್ನು ಸೆಳೆಯಲು ಮುಂದಾದರು. ಅಂತಿಮವಾಗಿ ಮಂಜು ಅವರು ಜೆಡಿಎಸ್ ಸೇರ್ಪಡೆಯಾಗಲಿದ್ದು, ಶೀಘ್ರ ದಿನಾಂಕ ನಿರ್ಧಾರವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.