ಟೋಕಿಯೋ(ನ.2): ಏನೋ ಮನೆ ಕಳ್ಳತನವಾಯ್ತು, ಕಾರು ಕದ್ದೋಯ್ದ್ರು, ಪರ್ಸ್ ಎಗರಿಸಿದ್ರು  ಅಂದ್ರೆ ನಂಬಬಹುದು. ಆದ್ರೆ ಇಡೀ ದ್ವೀಪಕ್ಕೆ ದ್ವೀಪಕ್ಕೆ ಮಾಯವಾಯ್ತು ಅಂದ್ರೆ ಯಾರಿಗಾದ್ರೂ ನಂಬೋದು ಕಷ್ಟ.

ಆದರೆ ಜಪಾನ್‌ನಲ್ಲಿ ಇಂತದ್ದೊಂದು ವಿಸ್ಮಯ ನಡೆದಿದೆ. ಜಪಾನ್‌ನ ಪ್ರಸಿದ್ಧ ಎಸೆಂಬೆ ಹನಾಕಿಟಾ ಕೊಯಿಮಾ ದ್ವೀಪದ ಬಹುತೇಕ ಭಾಗ ಸಮುದ್ರದಲ್ಲಿ ಮುಳುಗಡೆ ಹೊಂದಿದ್ದು, ಅತ್ಯಂತ ವೇಗವಾಗಿ ಬದಲಾಗುತ್ತಿರುವ ವಾತಾವರಣದ ಜಪಾನ್ ನಿದ್ದೆಗೆಡೆಸಿದೆ.

1987ರಲ್ಲಿ ಗುರುತಿಸಲಾದ ಎಸೆಂಬೆ ಹನಾಕಿಟಾ ಕೊಯಿಮಾ ದ್ವೀಪ, ಜಪಾನ್ ನ ಹೊಕ್ಕಾಯ್ಡೋ ದ್ವೀಪದ ತುದಿಯಿಂದಲೂ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ನಿರಂತರ ಭೂಕಂಪನ ಮತ್ತು ವಾತಾವರಣ ಬದಲಾವಣೆ ಪರಿಣಾಮವಾಗಿ ಈ ದ್ವೀಪ ಇದೀಗ ನಾಶ ಹೊಂದಿದೆ.

ಎಸೆಂಬೆ ಹನಾಕಿಟಾ ಕೊಯಿಮಾ ದ್ವೀಪ ಚೀನಾ ಮತ್ತು ದ.ಕೋರಿಯಾದ ಸಮುದ್ರ ಗಡಿಗೂ ಸಮೀಪದಲ್ಲಿ ಇದ್ದಿದ್ದರಿಂದ, ರಕ್ಷಣೆ ದೃಷ್ಟಿಯಿಂದಲೂ ಈ ದ್ವೀಪ ಜಪಾನ್ ಗೆ ಅತ್ಯಂತ ಮಹತ್ವದ್ದಾಗಿತ್ತು. ಅದರಲ್ಲೂ ದಕ್ಷಿಣ ಚೀನಾ ಸಮುದ್ರದ ನಿಯಂತ್ರಣಕ್ಕೆ ಹವಣಿಸುತ್ತಿರುವ ಚೀನಾಗೆ ಈ ದ್ವೀಪದ ಮುಳುಗಡೆ ಸಂತಸದ ವಿಚಾರವೇ ಸರಿ.

ಆದರೆ ಜಪಾನ್ ನಲ್ಲಿ ಈ ತರಹದ ವಿದ್ಯಮಾನ ಸಾಮಾನ್ಯ ಅಂತಾರೆ ಅಲ್ಲಿನ ಅಧಿಕಾರಿಗಳು. ಕಾರಣ ಭೂಕಂಪನ ಮತ್ತು ಜ್ವಾಲಾಮುಖಿಗಳು ಹೊಸ ದ್ವೀಪಗಳನ್ನು ಸೃಷ್ಟಿಸುವ ಮತ್ತು ಹಳೆಯ ದ್ವೀಪಗಳನ್ನು ಆಪೋಷಣ ತೆಗೆದುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂಬುದು ಭೂವಿಜ್ಞಾನಿಗಳು ಸ್ಪಷ್ಟೀಕರಣ ನೀಡಿದ್ದಾರೆ.