ವಿಧಾನಸಭೆ :  ಕಾರು ತಯಾರಿಸುವ ಟೊಯೋಟಾ ಕಿರ್ಲೋಸ್ಕರ್‌ ಕಾರ್ಖಾನೆಯಲ್ಲಿ ಶೇ.98ರಷ್ಟುಕನ್ನಡಿಗರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಂ. ಚಂದ್ರಪ್ಪ ಪ್ರಶ್ನೆಗೆ ಉತ್ತರ ನೀಡಿದ ಅವರು, ಟೊಯೋಟಾ ಕಿರ್ಲೋಸ್ಕರ್‌ ಕಾರ್ಖಾನೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಲಾಗಿದೆ. ಕಾರ್ಖಾನೆಯಲ್ಲಿ ಒಟ್ಟು 6,717 ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲಾಗಿದೆ. ಶೇ.98ರಷ್ಟುಉದ್ಯೋಗ ನೀಡಲಾಗಿದೆ. ಎ ಗ್ರೂಪ್‌ನಲ್ಲಿ 38, ಬಿ ಗ್ರೂಪ್‌ನಲ್ಲಿ 766, ಸಿ ಗ್ರೂಪ್‌ ನಲ್ಲಿ 1088, ಡಿ ಗ್ರೂಪ್‌ನಲ್ಲಿ 4825 ಮಂದಿ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕಾರ್ಖಾನೆಯು ಎರಡು ಹಂತದಲ್ಲಿ ಉತ್ಪಾದನೆಯ ಕಾರ್ಯವನ್ನು ಮಾಡಿದೆ. 1999ರ ಡಿ.24ರಂದು ಮೊದಲನೇ ಹಂತ ಮತ್ತು 2010ರ ಡಿ.21ರಂದು ಎರಡನೇ ಹಂತದಲ್ಲಿ ಆರಂಭಿಸಿದೆ. ಕಾರ್ಖಾನೆಯು ಮೊದಲನೇ ಹಂತದಲ್ಲಿ 3,733 ಕೋಟಿ ರು. ತೆರಿಗೆ ಪಾವತಿಸಬೇಕಾಗಿದ್ದು, ಇನ್ನು ಆರು ತಿಂಗಳ ಕಾಲಾವಕಾಶ ಇದೆ. ಅಲ್ಲದೇ, ಎರಡನೇ ಹಂತದಲ್ಲಿ 909 ಕೋಟಿ ರು. ತೆರಿಗೆ ಪಾವತಿಬೇಕಾಗಿದ್ದು, ಇನ್ನೂ 10 ವರ್ಷ ಕಾಲಾವಕಾಶ ಇದೆ ಎಂದರು.