Asianet Suvarna News Asianet Suvarna News

ಗೆಲ್ಲಲು 900 ರ್ಯಾಲಿ, 10000 ವಾಟ್ಸಾಪ್ ಗ್ರೂಪ್!

* 67 ಸಾವಿರ ಕಾರ್ಯಕರ್ತರ ಪಡೆ ಬಳಸಿಕೊಂಡಿದ್ದ ಬಿಜೆಪಿ
* ಪ್ರತಿ ಕ್ಷೇತ್ರಕ್ಕೂ ಕಾಪ್ಟರ್‌ ಮೂಲಕ ನಾಯಕರ ರವಾನೆ 
* ಬೂತ್‌ಗಳಿಗೆ 21 ಸದಸ್ಯರ ತಂಡ, ಮತದಾರರ ಮನೆ ಬಾಗಿಲಿಗೇ ವೋಟರ್‌ ಸ್ಲಿಪ್‌

900 rallies and 10000 whatsapp groups behind bjp victory in up

ಲಖನೌ: ಉತ್ತರಪ್ರದೇಶದಲ್ಲಿ ಐತಿಹಾಸಿಕ ಬಹುಮತ ಗಳಿಸಿರುವ ಬಿಜೆಪಿ ಅದನ್ನು ಸಂಪಾದಿಸಲು ಪಟ್ಟಶ್ರಮದ ಚಿತ್ರಣ ಈಗ ಲಭ್ಯವಾಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಹಿರಿಹಿರಿ ಹಿಗ್ಗಿದ್ದ ಕಮಲ ಪಾಳೆಯ, ದೇಶದ ಅತಿದೊಡ್ಡ ಜನಸಂಖ್ಯೆಯ ರಾಜ್ಯದ ಗದ್ದುಗೆ ಹಿಡಿಯಲು ಎರಡು ವರ್ಷಗಳ ಹಿಂದೆಯೇ ಕಾರ್ಯಪ್ರವೃತ್ತವಾಗಿತ್ತು. ಇದಕ್ಕಾಗಿ 900 ರ್ಯಾಲಿ, 67 ಸಾವಿರ ಕಾರ್ಯಕರ್ತರು, 10 ಸಾವಿರ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ಬಳಕೆ ಮಾಡಿಕೊಂಡಿತ್ತು ಎಂಬ ಅಂಶ ಬಹಿರಂಗವಾಗಿದೆ.

ಈ 900 ರ್ಯಾಲಿಗಳ ಪೈಕಿ 23ರಲ್ಲಿ ಖುದ್ದು ನರೇಂದ್ರ ಮೋದಿಯೇ ಭಾಗವಹಿಸಿದ್ದರು. ಇದಲ್ಲದೆ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 2ರಿಂದ 4 ಆಯೋಜನೆ ಗೊಳ್ಳುವಂತೆ ನೋಡಿಕೊಳ್ಳಲಾಗಿತ್ತು. ತನ್ನ ನಾಯಕರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಹೆಲಿಕಾಪ್ಟರ್‌ ಮೂಲಕವೇ ತೆರಳುವಂತೆ ಮಾಡಿತ್ತು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ 1,47,401 ಮತಗಟ್ಟೆಗಳಿದ್ದು, ಆ ಪೈಕಿ ಪ್ರತಿ ಮತಗಟ್ಟೆಗೂ 10ರಿಂದ 21 ಸದಸ್ಯರ ತಂಡವನ್ನು ರಚಿಸಲಾಗಿತ್ತು. ‘ಬೂತ್‌ ವಿಜಯ್‌ ಅಭಿಯಾನ್‌' ಹೆಸರಿನಲ್ಲಿ ಪ್ರತಿ ಮನೆಗೂ ವೋಟರ್‌ ಸ್ಲಿಪ್‌ ಕೊಟ್ಟು, ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ವಿನಂತಿಸಿಕೊಳ್ಳಲಾಗಿತ್ತು.

ಪಕ್ಷದ ಎಲ್ಲ ಹಿರಿಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ನಾಯಕತ್ವದ ವಿರುದ್ಧ ಮಾತನಾಡದಂತೆ ನೋಡಿಕೊಳ್ಳಲಾಗಿತ್ತು. ಹಲವು ಹಿರಿಯ ಮುಖಂಡರ ಪುತ್ರರಿಗೆ ಟಿಕೆಟ್‌ ಕೊಟ್ಟು ಅವರು ಸಂತೋಷದಿಂದ ಪ್ರಚಾರದಲ್ಲಿ ವ್ಯಸ್ತರಾಗಿರುವಂತೆ ಮಾಡಲಾಗಿತ್ತು.

ಮಾಯಾವತಿ ಮತ ಬ್ಯಾಂಕ್‌ ಆಗಿರುವ ದಲಿತ ಮತಗಳ ಮೇಲೆ ಕಣ್ಣಿಟ್ಟು ಮಾಜಿ ಸಂಸದ, ಬೌದ್ಧ ನಾಯಕ ಧಮ್ಮಾ ವಿರಿಯೋ ನೇತೃತ್ವದಲ್ಲಿ ‘ಧಮ್ಮ ಚೇತನ ಯಾತ್ರೆ'ಯನ್ನು ಕಳೆದ ವರ್ಷ ಆಯೋಜಿಸಿ ದಲಿತ- ಒಬಿಸಿ ಬಾಹುಳ್ಯದ 175 ಕ್ಷೇತ್ರಗಳಲ್ಲಿ ಸುತ್ತಾಡುವಂತೆ ಮಾಡಲಾಗಿತ್ತು. ಪ್ರತಿ ಕ್ಷೇತ್ರದಲ್ಲೂ ಪರಿವರ್ತನೆ ಯಾತ್ರೆ ನಡೆಸಲಾಯಿತು. ಕಾಲೇಜುಗಳಿಗೆ ತೆರಳಿ ಯುವ ಮತದಾರರನ್ನು ಸೆಳೆಯಲಾಯಿತು. ಯುವ ಸಮ್ಮೇಳನ, ಮಹಿಳಾ ಸಮ್ಮೇಳನ, ಒಬಿಸಿ ಸಮ್ಮೇಳನ, ಎಸ್ಸಿ/ಎಸ್ಟಿಗಳಿಗಾಗಿ ಸ್ವಾಭಿಮಾನಿ ಸಮ್ಮೇಳನ ಹಾಗೂ ವ್ಯಾಪಾರಿ ಸಮ್ಮೇಳನಗಳನ್ನು ಆಯೋಜಿಸಿ ಪ್ರತಿ ವರ್ಗವನ್ನೂ ಓಲೈಸಲಾಯಿತು. ಅದರ ಫಲ ಈಗ ಸಿಕ್ಕಿದೆ ಎಂದು ನಾಯಕರು ಹೇಳುತ್ತಾರೆ.

ಸಿಎಂಗಳ ಆಯ್ಕೆ ಹೊಣೆ ಅಮಿತ್‌ ಶಾಗೆ
ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರ ಸಿಎಂ ಆಯ್ಕೆಯ ಹೊಣೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಹೆಗಲಿಗೆ ವಹಿಸಲಾಗಿದೆ. ಭಾನುವಾರ ಸಂಸದೀಯ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಎಂ.ವೆಂಕಯ್ಯ ನಾಯ್ಡು, ಭೂಪೇಂದ್ರ ಯಾದವ್‌'ರನ್ನು ಯುಪಿಗೆ, ನರೇಂದ್ರ ಸಿಂಗ್‌ ತೋಮರ್‌, ಸರೋಜ್‌ ಪಾಂಡೆ ಅವರನ್ನು ಉತ್ತರಾಖಂಡಕ್ಕೆ, ಪಿಯೂಷ್‌ ಗೋಯಲ್‌, ವಿನಯ್‌ ಸಹಸ್ರಬುದ್ಧೆ ಅವರನ್ನು ಮಣಿಪುರಕ್ಕೆ ವೀಕ್ಷರನ್ನಾಗಿ ನೇಮಿಸಲಾಗಿದೆ. ಇವರೆಲ್ಲಾ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ಶಾಗೆ ಮಾಹಿತಿ ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

(epaper.kannadaprabha.in)

Follow Us:
Download App:
  • android
  • ios