ನವದೆಹಲಿ[ಆ.06]: ಜಮ್ಮು ಮತ್ತು ಕಾಶ್ಮೀರದಲ್ಲಿ ಏನೋ ಆಗುತ್ತಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸದ್ಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬ ವದಂತಿಗಳು ಹಲವು ದಿನಗಳಿಂದ ಎಲ್ಲೆಡೆ ಹಬ್ಬುತ್ತಲೇ ಇದ್ದವು. ಆರಂಭದಲ್ಲಿ ಗಾಳಿ ಸುದ್ದಿ ಸ್ವರೂಪದಲ್ಲಿದ್ದ ಮಾಹಿತಿಗಳು ದಿನಕಳೆದಂತೆ ನಿರ್ದಿಷ್ಟುಸ್ವರೂಪ ಪಡೆದುಕೊಳ್ಳುತ್ತಾ ಹೋದವು. ಕೇಂದ್ರ ಸರ್ಕಾರ ಇಟ್ಟಹಲವು ಹೆಜ್ಜೆಗಳು, ಏನೋ ಆಗುತ್ತಿರುವುದು ನಿಜ ಎಂಬುದನ್ನು ಖಚಿತಪಡಿಸಿದ್ದವು. ಏನಾಗಲಿದೆ ಎಂಬ ಖಚಿತ ಮಾಹಿತಿ ಬಹಿರಂಗವಾಗಿರಲಿಲ್ಲವಾದರೂ, ಮಹತ್ವದ ಬೆಳವಣಿಗೆ ಸುಳಿವಂತೂ ಸಿಕ್ಕಿತ್ತು. ಇಂಥ ಸುಳಿವು ಸಿಗಲು ಕಾರಣವಾದ ಅಂಶಗಳು ಹೀಗಿವೆ...

*ಜುಲೈ 27, ಶನಿವಾರ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಎರಡು ದಿನಗಳ ಕಾಶ್ಮೀರ ಭೇಟಿ ಮುಗಿಸಿ ಬಂದ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 10000 ಯೋಧರನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಇದು ಮೊದಲ ಬಾರಿಗೆ ರಾಜ್ಯದಲ್ಲಿ ಏನೋ ಆಗುತ್ತಿರುವ ಸ್ಪಷ್ಟಸುಳಿವು ನೀಡಿತ್ತು.

*ಜುಲೈ 28, ಭಾನುವಾರ

ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಇತ್ತೀಚೆಗೆ ಹೊರಡಿಸಿದ ಎಲ್ಲಾ ಆದೇಶಗಳು, ಕೈಗೊಂಡ ನಿರ್ಧಾರಗಳು, ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಕೈಗೊಂಡ ಹೆಜ್ಜೆಗಳಂತಿವೆ. ಒಂದು ವೇಳೆ ಸರ್ಕಾರ ಅಂಥ ದುಸ್ಸಾಹಸ ಮಾಡಿದಲ್ಲಿ, ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಎಚ್ಚರಿಕೆ.

*ಜುಲೈ 29, ಸೋಮ​ವಾ​ರ

ಜಮ್ಮು ಕಾಶ್ಮೀ​ರದ ಮಸೀದಿ ಹಾಗೂ ಅವು​ಗಳ ಆಡ​ಳಿತ ಸಮಿ​ತಿಯ ವಿವ​ರ​ಗ​ಳ​ನ್ನು ಪೊಲೀ​ಸರು ಸಂಗ್ರ​ಹಿ​ಸಿ​ದ್ದರು. ಪೊಲೀ​ಸರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರ​ಣ​ವಾ​ಗಿತ್ತು. ಇದು 35ಎ ವಿಧಿ​ಯನ್ನು ರದ್ದು ಪಡಿ​ಸುವ ಮುನ್ಸೂ​ಚನೆ ಎಂದು ನೆಟ್ಟಿ​ಗ​ರು ಅಭಿ​ಪ್ರಾಯ ವ್ಯಕ್ತ ಪಡಿ​ಸಿ​ದ್ದ​ರು.

*ಜುಲೈ 20, ಮಂಗಳವಾರ

ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಲಾಗುತ್ತದೆ ಎಂಬ ವದಂತಿ ಬಗ್ಗೆ ಕಿವಿಗೊಡಬೇಡಿ ಎಂದು ಜನಸಾಮಾನ್ಯರಿಗೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ರಿಂದ ಸೂಚನೆ. ಆದರೆ ತುರ್ತು ಪರಿಸ್ಥಿತಿ ಸಜ್ಜಾಗಲು ಸಿದ್ಧರಾಗಿ ಎಂಬ ರೈಲ್ವೆ ಅಧಿಕಾರಿಯೊಬ್ಬರ ಬಗ್ಗೆ ರಾಜ್ಯಪಾಲರಿಂದ ಯಾವುದೇ ಪ್ರಸ್ತಾಪ ಇಲ್ಲ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

*ಜುಲೈ 31, ಬುಧ​ವಾ​ರ

ಜಮ್ಮು ಕಾಶ್ಮೀರ ಸಂಬಂಧ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊ​ಳ್ಳುವ ಮುನ್ಸೂ​ಚನೆ ಅರಿತ ಮಾಜಿ ಮುಖ್ಯ​ಮಂತ್ರಿ ಮೆಹ​ಬೂಬಾ ಮುಫ್ತಿ, ದಕ್ಷಿಣ ಕಾಶ್ಮೀ​ರದ ಕುಲ್‌ಗಾಂವ್‌, ಶೋಪಿ​ಯಾನ್‌ ಹಾಗೂ ಪುಲ್ವಾಮ ಜಿಲ್ಲೆ​ಯಲ್ಲಿ ಪಿಡಿಪಿ ಕಾರ್ಯ​ಕ​ರ್ತ​ರೊಂದಿಗೆ ಚರ್ಚೆ ನಡೆಸಿ 35ಎ ವಿಧಿಯ ಬಗ್ಗೆ ಜನ​ರಲ್ಲಿ ಜಾಗೃತಿ ಅಭಿ​ಯಾನ ಮಾಡ​ಬೇಕು ಎಂದು ಸೂಚನೆ ನೀಡಿ​ದ್ದರು. ಇದಕ್ಕೆ ಶ್ರೀನ​ಗ​ರ​ದಲ್ಲಿ ಉತ್ತರಿಸಿದ ಬಿಜೆ​ಪಿ ರಾಷ್ಟ್ರೀಯ ಕಾರ್ಯ​ದ​ರ್ಶಿ ರಾಮ್‌ ಮಾಧವ್‌, ಮುಫ್ತಿ ಜನ​ರಲ್ಲಿ ಭಯದ ವಾತಾ​ವ​ರಣ ಸೃಷ್ಠಿ ಮಾಡು​ತ್ತಿ​ದ್ದಾ​ರೆ. ಕಾಶ್ಮೀರ ಸಂಬಂಧ ಜನರ ಹಿತಾ​ಸಕ್ತಿ ವಿರು​ದ್ಧವಾಗಿ ಯಾವುದೇ ನಿರ್ಧಾ​ರ​ಗ​ಳನ್ನು ತೆಗೆ​ದು​ಕೊ​ಳ್ಳ​ಲಾ​ಗು​ವು​ದಿಲ್ಲ ಎಂದು ಹೇಳಿ​ದ್ದ​ರು.

*ಆಗಸ್ಟ್‌ 1, ಗುರು​ವಾ​ರ

ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯ​ಮಂತ್ರಿ ಫಾರೂಖ್‌ ಅಬ್ದುಲ್ಲಾ ನೇತೃ​ತ್ವದ ನಿಯೋಗ ಪ್ರಧಾನಿ ಮೋದಿ​ಯ​ವ​ರನ್ನು ಭೇಟಿ ಮಾಡಿ 35ಎ ವಿಧಿ​ಯನ್ನು ರದ್ದು​ಗೊಳಿಸುವ ಪ್ರಸ್ತಾವ ಕೈಗೊ​ಳ್ಳ​ಬಾ​ರದು ಎಂದು ಮನವಿ ಮಾಡಿತ್ತು. ಅಲ್ಲದೇ ಅಂದೇ ಭದ್ರತಾ ಪಡೆ​ಗಳು 280 ತಂಡ ಕಣಿ​ವೆ​ಯಲ್ಲಿ ನಿಯೋ​ಜಿ​ಸ​ಲಾ​ಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಅದನ್ನು ಕೇಂದ್ರ ಗೃಹ ಇಲಾಖೆ ತಳ್ಳಿ ಹಾಕಿ​ತ್ತು.

*ಆಗಸ್ಟ್‌ 2, ಶುಕ್ರ​ವಾ​ರ

ಉಗ್ರರ ಬೆದ​ರಿಕೆ ಇರು​ವು​ದ​ರಿಂದ ಆಗಸ್ಟ್‌ 15 ರಂದು ಅಂತ್ಯ​ವಾ​ಗ​ಬೇ​ಕಾ​ದ ಅಮ​ರನಾ​ಥ ಯಾತ್ರೆಯನ್ನು ಅರ್ಧ​ಕ್ಕೆ ಮೊಟ​ಕು​ಗೊ​ಳಿಸಿ, ಸ್ವಂತ ಊರಿಗೆ ಮರ​ಳು​ವಂತೆ ಜಮ್ಮು ಕಾಶ್ಮೀರ ಸರ್ಕಾರ ಆದೇಶ ಮಾಡಿತ್ತು. ಜತೆಗೆ ಪ್ರವಾ​ಸಿ​ಗಳು ಹಾಗೂ ಹೊರ ರಾಜ್ಯದ ನಿವಾ​ಸಿ​ಗಳು, ವಿದ್ಯಾ​ರ್ಥಿ​ಗಳು ರಾಜ್ಯ ಬಿಡು​ವಂತೆ ಸೂಚನೆ ನೀಡಿತ್ತು.

*ಆಗಸ್ಟ್‌ 3, ಶನಿ​ವಾ​ರ

ಗಡಿ ನಿಯಂತ್ರಣ ರೇಖೆ ಬಳಿ ಇರುವ ಸೇನಾ ನೆಲೆ ಮೇಲೆ ಪಾಕ್‌ ಸೈನ್ಯ ದಾಳಿ ನಡೆ​ಸು​ತ್ತಿ​ದ್ದು, ಭಾರೀ ಹಾನಿ ಸಂಭ​ವಿ​ಸಿದೆ. ಮಾತ್ರ​ವಲ್ಲ ಪಾಕ್‌ ಬೆಂಬ​ಲಿತ ಉಗ್ರರು ಒಳ​ನು​ಸು​ಳು​ತ್ತಿ​ದ್ದಾ​ರೆ ಎಂದು ಸೇನಾ ಮೂಲ​ಗಳು ಹೇಳಿ​ತ್ತು. ಅಂದೇ ನ್ಯಾಶ​ನಲ್‌ ಕಾನ್ಫ​ರೆನ್ಸ್‌ ಮುಖ್ಯ​ಸ್ಥ ಓಮರ್‌ ಅಬ್ದುಲ್ಲಾ ರಾಜ್ಯ​ಪಾಲ ಸತ್ಯ​ಪಾಲ್‌ ಮಲ್ಲಿಕ್‌ ರನ್ನು ಭೇಟಿ ಮಾಡಿ, ಕಾಶ್ಮೀ​ರ​ದಲ್ಲಿ ನಡೆ​ಯು​ತ್ತಿ​ರುವ ಬೆಳ​ವ​ಣಿ​ಗೆ​ಗಳು ಹಾಗೂ ಹರ​ಡ​ಲಾ​ಗು​ತ್ತಿ​ರುವ ಗಾಳಿ ಸುದ್ದಿ​ಗಳ ಬಗ್ಗೆ ಸ್ಪಷ್ಟನೆ ನೀಡ​ಬೇಕು ಎಂದು ಮನವಿ ಮಾಡಿ​ದ್ದರು.

*ಆಗಸ್ಟ್‌ 4, ಭಾನು​ವಾ​ರ

ಕಾಶ್ಮೀರ ವಿಚಾ​ರಕ್ಕೆ ಸಂಬಂಧಿ​ಸಿ​ದಂತೆ ಪ್ರಸಕ್ತ ಸನ್ನಿ​ವೇ​ಶದ ಮಾಹಿತಿ ಪಡೆ​ಯಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಷ್ಟ್ರ ರಾಜ​ಧಾ​ನಿ​ಯಲ್ಲಿ ಹಿರಿಯ ಭದ್ರತಾ ಅಧಿ​ಕಾ​ರಿ​ಗಳ ಸಭೆ ಕರೆ​ದಿ​ದ್ದರು. ಈ ಸಭೆ​ಯಲ್ಲಿ ರಾಷ್ಟ್ರೀಯ ಭದ್ರತೆ ಸಲ​ಹೆ​ಗಾರ ಅಜಿತ್‌ ಧೋವಲ್‌, ಕೇಂದ್ರ ಗೃಹ ಕಾರ್ಯ​ದರ್ಶಿ ರಾಜೀವ್‌ ಗುಭಾ ಸಹಿತ ಹಲವು ಉನ್ನತ ಅಧಿ​ಕಾ​ರಿ​ಗಳು ಭಾಗ​ವ​ಹಿ​ಸಿ​ದ್ದ​ರು. ಅಂದೇ ರಾತ್ರಿ ಫಾರೂಖ್‌ ಅಬ್ದುಲ್ಲಾ ನಿವಾ​ಸ​ದಲ್ಲಿ ಕಾಶ್ಮೀ​ರದ ಎಲ್ಲಾ ಪಕ್ಷ​ಗಳ ಸಭೆ ಕೂಡ ನಡೆ​ಯಿ​ತು.