ಚಿತ್ರದುರ್ಗ(ಸೆ.07): ಕೊಪ್ಪಳದ ಮಲ್ಲಮ್ಮ, ಮನೆಯಲ್ಲಿ ಶೌಚಾಲಾಯ ನಿರ್ಮಾಣಕ್ಕಾಗಿ ಉಪವಾಸ ಆರಂಭಿಸಿ, ದೇಶದ ಗಮನ ಸೆಳೆದಿದ್ದರು. ಆದರೆ, ಮಲ್ಲಮ್ಮನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ವಿದ್ಯಾರ್ಥಿನಿಯೊಬ್ಬಳು, ತಮ್ಮ ಗ್ರಾಮದಲ್ಲಿನ ಪ್ರತಿಯೊಂದು ಮನೆಗಳಿಗೂ ಶೌಚಾಲಯ ಕಟ್ಟಿಸಬೇಕೆಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೇಮದಳದ ನಿವಾಸಿ ಚನ್ನಬಸಪ್ಪ ಪುತ್ರಿನ ಲಾವಣ್ಯ ಇದೀಗ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಾಲಕಿ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿ ಏಕಾಏಕಿ ಧರಣಿ ನಡೆಸಲು ಒಂದು ಸದ್ದುದ್ದೇಶದ ಕಾರಣವೂ ಇದೆ.

ಇತ್ತೀಗಷ್ಟೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಢಾಣಾಪುರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮ, ಉಪವಾಸ ಮಾಡಿ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದ ಬಗ್ಗೆ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸಿದ್ರು. ಇದ್ರ ಬೆನ್ನಲ್ಲೆ ಲಾವಣ್ಯ ಕೂಡ ತಮ್ಮ ಗ್ರಾಮದ ಪ್ರತಿಯೊಂದು ಮನೆಗೂ ಶೌಚಾಲಯ ಬೇಕು ಎಂಬ ಉದ್ದೇಶ ಇಟ್ಕೊಂಡು ಸತ್ಯಾಗ್ರಹ ನಡೆಸುತ್ತಿದ್ದಾಳೆ.

ಹೀಗೆ ಏಕಾಏಕಿ ಶೌಚಾಲಯ ನಿರ್ಮಿಸಬೇಕೆಂದು ಉಪವಾಸ ನಡೆಸೋದಕ್ಕೆ ಕಾರಣವೂ ಇದೆ. ಕಳೆದ ಒಂದು ವಾರದ ಹಿಂದೆ ಹಿರಿಯೂರಿನ ಬೆಳಘಟ್ಟ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದಾಗ ಇವ್ರ ಸಂಬಂಧಿ ತಿಮ್ಮಕ್ಕ ಎಂಬುವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಇಂತಹ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ಲಾವಣ್ಯ ನಿನ್ನೆಯಿಂದ ಸತ್ಯಾಗ್ರಹ ನಡೆಸುತ್ತಿದ್ದಾಳೆ.

ಈ ಹಿಂದೆ ರೈತರ ಆತ್ಮಹತ್ಯೆ ತಡೆಯಬೇಕೆಂದು ಸುವರ್ಣ ಸೌಧದವರೆಗೂ ಈಕೆ ಪಾದಯಾತ್ರೆ ಮಾಡಿದ್ಳಂತೆ. ಒಟ್ನಲ್ಲಿ ಮಲ್ಲಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಉಪವಾಸ ಮಾಡಿದ್ರೆ, ಲಾವಣ್ಯ ಗ್ರಾಮದ ಪ್ರತಿಯೊಂದು ಮನೆಗಳಿಗೂ ಶೌಚಾಲಯ ನಿರ್ಮಿಸಬೇಕೆಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಳೆ. ಈ ಮೂಲಕ ತಮ್ಮ ಗ್ರಾಮವನ್ನು ಬಯಲು ಮುಕ್ತ ಗ್ರಾಮವನ್ನಾಗಿ ಮಾಡಲು ಮುಂದಾಗಿದ್ದಾಳೆ.