ಮುಂಬೈ[ಜೂ.12]: ದೇಶದ ಬೆನ್ನೆಲುಬು ಎಂದೇ ಕರೆಯಲಾಗುವ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ರೀತಿಯ ಯೋಜನೆಗಳನ್ನು ಜಾರಿಗೆ ತಂದ ಹೊರತಾಗಿಯೂ, ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 808 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ. ಈ ಪ್ರಕಾರ ಮಹಾರಾಷ್ಟ್ರವೊಂದರಲ್ಲೇ ದಿನವೊಂದಕ್ಕೆ ಸರಾಸರಿ 7 ಮಂದಿ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ 896 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ತವರು ಪ್ರಾಂತ್ಯವಾದ ವಿದರ್ಭದಲ್ಲೇ ಹೆಚ್ಚಿನ ರೈತರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಪ್ರಕಾರ ಈ ವರ್ಷದ ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೂ ವಿದರ್ಭದಲ್ಲಿ 344 ರೈತರು, ಕುಡಿಯುವ ನೀರಿಗೂ ತತ್ವಾರ ಎದುರಾಗಿರುವ ಮರಾಠವಾಡ ಪ್ರಾಂತ್ಯದಲ್ಲಿ 269, ಉತ್ತರ ಮಹಾರಾಷ್ಟ್ರದಲ್ಲಿ 161 ಹಾಗೂ ಹೆಚ್ಚಾಗಿ ಕಬ್ಬು ಬೆಳೆಯುವ ಪಶ್ಚಿಮ ಮಹಾರಾಷ್ಟ್ರದಲ್ಲಿ 34 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಕೊಂಕಣ್‌ ಪ್ರಾಂತ್ಯದಲ್ಲಿ ಯಾವುದೇ ರೈತರು ಆತ್ಮಹತ್ಯೆಗೆ ಶರಣಾದ ವರದಿಗಳಾಗಿಲ್ಲ.

2018-19ನೇ ಸಾಲಿನಲ್ಲಿ ಮಹಾರಾಷ್ಟ್ರದ ಶೇ.42 ತಾಲೂಕುಗಳಲ್ಲಿ ಭಾರೀ ಬರಗಾಲ ವ್ಯಾಪಿಸಿದ್ದು, ರಾಜ್ಯದ ಶೇ.60ರಷ್ಟುಪ್ರಮಾಣದ ರೈತರ ಬೆಳೆಗಳು ಹಾಳಾಗಿವೆ. ಇದರಿಂದ ರಾಜ್ಯದ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.