Asianet Suvarna News Asianet Suvarna News

ನಗರದಲ್ಲಿ 801 ವಿದೇಶಿಗರ ಅಕ್ರಮ ವಾಸ: ವೀಸಾ ಮುಗಿದರೂ ಸ್ವದೇಶಕ್ಕೆ ಮರಳಿಲ್ಲ!

ನಗರದಲ್ಲಿ 801 ವಿದೇಶಿಗರ ಅಕ್ರಮ ವಾಸ| ವೀಸಾ ಅವಧಿ ಮುಗಿದರೂ ಸ್ವದೇಶಕ್ಕೆ ಮರಳದೇ ವಾಸ| ಖುದ್ದು ಪೊಲೀಸ್‌ ಆಯುಕ್ತರಿಂದಲೇ ಹೈಕೋರ್ಟ್‌ಗೆ ಮಾಹಿತಿ| 92 ವೀಸಾ ನವೀಕರಣ, ಸ್ವದೇಶಕ್ಕೆ ಹೋಗಲು ಎಕ್ಸಿಟ್‌ ಪರ್ಮಿಟ್‌ಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ| 57 ತಲೆಮರೆಸಿಕೊಂಡಿರುವ ಅಕ್ರಮವಾಸಿಗಳ ಸಂಖ್ಯೆ

801 Foreigners Illegally living in bangalore police Commissioner Provides Info To high court
Author
Bangalore, First Published Apr 30, 2019, 7:57 AM IST

ವೆಂಕಟೇಶ್‌ ಕಲಿಪಿ, ಕನ್ನಡಪ್ರಭ

ಬೆಂಗಳೂರು[ಏ.30]: ಅಕ್ರಮವಾಗಿ ನೆಲೆಸಿದ ಪಾಕಿಸ್ತಾನಿ ದಂಪತಿಯನ್ನು ಗಡೀಪಾರು ಮಾಡಲು ರಾಜ್ಯ ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಆದೇಶಿಸಿರುವ ಬೆನ್ನಲ್ಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 801 ವಿದೇಶಿಗರು ಸ್ವದೇಶಕ್ಕೆ ತೆರಳದೆ ಅಕ್ರಮವಾಗಿ ವಾಸಿಸುತ್ತಿರುವ ಆತಂಕದ ಸಂಗತಿ ಬಹಿರಂಗವಾಗಿದೆ.

ಇಂತಹೊಂದು ಮಾಹಿತಿಯನ್ನು ಖುದ್ದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹೈಕೋರ್ಟ್‌ ಮುಂದೆ ಇಟ್ಟಿದ್ದಾರೆ.

ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ಕಾಂಗೋ ವಿದ್ಯಾರ್ಥಿಯೋರ್ವನ ವಿರುದ್ಧ ದಾಖಲಿಸಿದ್ದ ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಕಾಂಗೋ ವಿದ್ಯಾರ್ಥಿ ಮಾತ್ರವಲ್ಲದೆ, ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವೀಸಾ ಅವಧಿ ಮುಗಿದ ನಂತರವೂ ನೆಲೆಸಿರುವ ವಿದೇಶಿಯರ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

801 ವಿದೇಶಿಗರು ಓವರ್‌ ಸ್ಟೇ:

ಈ ವರದಿಯಲ್ಲಿ ವೀಸಾ ಅವಧಿ ಮುಗಿದರೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 801 ವಿದೇಶಿಗರು ನೆಲೆಸಿದ್ದಾರೆ. ಅದರಲ್ಲಿ 92 ಮಂದಿ ವೀಸಾ ನವೀಕರಣ ಹಾಗೂ ಸ್ವದೇಶಕ್ಕೆ ಹೋಗಲು ಎಕ್ಸಿಟ್‌ ಪರ್ಮಿಟ್‌ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳು ಪರಿಶೀಲನೆಯಲ್ಲಿವೆ. ಇನ್ನೂ ಈ ಪೊಲೀಸ್‌ ದಾಖಲೆಗಳ ಪ್ರಕಾರ ಓವರ್‌ ಸ್ಟೇ ಆಗಿರುವವರಲ್ಲಿ ಒಟ್ಟು 57 ಮಂದಿ ತಲೆಮರೆಸಿಕೊಂಡಿದ್ದು, ಈವರೆಗೂ ಪತ್ತೆಯಾಗಿಲ್ಲ ಎಂಬ ಮಾಹಿತಿ ನೀಡಲಾಗಿದೆ.

ಭಾರತ ಬಿಡಲು ನೋಟಿಸ್‌:

ಇದಲ್ಲದೆ, ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದವರನ್ನು ಸ್ವದೇಶಕ್ಕೆ ಕಳುಹಿಸಲು ಕೈಗೊಂಡಿರುವ ಕ್ರಮ ಬಗ್ಗೆಯೂ ವರದಿಯಲ್ಲಿ ಮಾಹಿತಿ ನೀಡಲಾಗಿದ್ದು, ಇಂತಹ ವಿದೇಶಿಗರ ವಿರುದ್ಧ ಲುಕ್‌ಔಟ್‌ ನೋಟಿಸ್‌ (ಎಲ್‌ಓಸಿ) ಹಾಗೂ ಭಾರತ ಬಿಟ್ಟು ತೆರಳುವಂತೆ ಸೂಚಿಸಿ ನೋಟಿಸ್‌ ಜಾರಿಗೊಳಿಸಲಾಗಿದೆ. ಜತೆಗೆ, ಪ್ರತಿ ತಿಂಗಳು ಸಹ ನಗರದಲ್ಲಿ ವೀಸಾ ಅವಧಿ ಮುಗಿದ ನಂತರವೂ ನೆಲೆಸಿರುವವರ ಬಗ್ಗೆ ಸಂಬಂಧ ಪಟ್ಟಅಧಿಕಾರಿಗಳಿಗೆ ಮಾಹಿತಿ ಒದಗಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ:

ವೀಸಾ ಮೇಲೆ ಭಾರತಕ್ಕೆ ಬಂದ ವಿದೇಶಿಗರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದಾರೆ. ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಹೀಗೆ ಉಳಿದಿರುವ ವಿದ್ಯಾರ್ಥಿಗಳು ಮಾದಕ ದ್ರವ್ಯ ಸಾಗಣೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೆಲ ಪ್ರಕರಣಗಳ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಹೈಕೋರ್ಟ್‌ ಹಿಂದೆ ಆತಂಕ ವ್ಯಕ್ತಪಡಿಸಿತ್ತು.

ಅಲ್ಲದೆ, ಎಷ್ಟುಮಂದಿ ವೀಸಾ ಅವಧಿ ಮುಗಿದ ನಂತರವೂ ನೆಲೆಸಿದ್ದಾರೆ? ಇಂತಹವರ ಪೈಕಿ ತಲೆ ಮರೆಸಿಕೊಂಡವರ ಸಂಖ್ಯೆ ಎಷ್ಟು? ಅವರನ್ನು ತಲೆಮರೆಸಿಕೊಂಡವರು ಎಂದು ಘೋಷಿಸಲು ಕೈಗೊಂಡ ಕ್ರಮಗಳೇನು? ಎಷ್ಟುಮಂದಿ ಪತ್ತೆಯಾಗಿಲ್ಲ? ಎಂಬಿತ್ಯಾದಿ ಮಾಹಿತಿಯನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಕಚೇರಿಯಿಂದ (ಎಫ್‌ಆರ್‌ಆರ್‌ಓ) ಪಡೆದು ತಿಳಿಸುವಂತೆ ರಾಜ್ಯ ಅಡ್ವೋಕೇಟ್‌ ಜನರಲ್‌ಗೆ ಹೈಕೋರ್ಟ್‌ ನಿರ್ದೇಶಿಸಿತ್ತು. ಅದರಂತೆ ಅಡ್ವೋಕೇಟ್‌ ಜನರಲ್‌ ನೀಡಿದ್ದ ಸೂಚನೆ ಮೇರೆಗೆ ಎಫ್‌ಆರ್‌ಆರ್‌ಓರಿಂದ ನಗರ ಪೊಲೀಸ್‌ ಆಯುಕ್ತರು ಮಾಹಿತಿ ಪಡೆದು ಹೈಕೋರ್ಟ್‌ಗೆ ಒದಗಿಸಿದ್ದಾರೆ.

ಆಫ್ರಿಕಾ ಮೂಲದವರೇ ಹೆಚ್ಚು

ವೀಸಾ ಅವಧಿ ಮುಗಿದ ನಂತರವೂ ನಗರದಲ್ಲಿ ನೆಲೆಸಿರುವ ವಿದೇಶಿಯರಲ್ಲಿ ನೈಜೀರಿಯಾ, ಕಾಂಪೋಡಿಯಾ, ಕಾಂಗೋ, ತಾಂಜೇನಿಯಾ, ಅಲ್ಜೀರಿಯಾ, ಘಾನಾ, ಉಗಾಂಡ ದೇಶದವರು ಹೆಚ್ಚಿನವರಾಗಿದ್ದಾರೆ. ಹಾಗೆಯೇ, ಭಾರತದ ನೆರೆ ರಾಷ್ಟ್ರಗಳಾದ ಬಾಂಗ್ಲಾ ಹಾಗೂ ಪಾಕಿಸ್ತಾನದವರು ಕೂಡ ವೀಸಾ ಪಡೆಯದೇ ಅಕ್ರಮವಾಗಿ ನುಸುಳಿ ಬಂದು ನೆಲೆಸುವ ಪ್ರಕರಣಗಳು ಹೆಚ್ಚಿವೆ ಎಂದು ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾದ ಅನೇಕ ವಿದೇಶಿಗರ ವಿರುದ್ಧ ಕೇಸು ದಾಖಲಿಸಿರುವ ಸಿಸಿಬಿ ಪೊಲೀಸರ ಮೂಲಗಳು ತಿಳಿಸಿದೆ.

Follow Us:
Download App:
  • android
  • ios