ನವದೆಹಲಿ/ಜಮ್ಮು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲಿನ ವಿಧ್ವಂಸಕ ದಾಳಿಗೆ ಜೈಷ್ -ಎ-ಮೊಹಮ್ಮದ್ ಉಗ್ರ ಆದಿಲ್ ಅಹ್ಮದ್ ಸುಮಾರು 80 ಕೇಜಿ ಹೈಗ್ರೇಡ್ ಆರ್‌ಡಿಎಕ್ಸ್ ಸ್ಫೋಟಕ ಹಾಗೂ ಸ್ಥಳೀಯ ಕಲ್ಲು ಕ್ವಾರಿ ಗಣಿಗಾರಿಕೆಗೆ ಬಳಸುವ ಅಪಾರ ಪ್ರಮಾಣದ ‘ಸೂಪರ್ 90’ (ಯೂರಿಯಾ ಅಮೋನಿಯಂ ನೈಟ್ರೇಟ್) ರಾಸಾಯನಿಕ ಬಳಸಿರುವುದು ಕಂಡುಬಂದಿದೆ. 

ಕಾಶ್ಮೀರದಲ್ಲಿ ಉಗ್ರರು ಆರ್‌ಡಿಎಕ್ಸ್ ಬಳಕೆ ಮಾಡಿದ್ದು ಕಳೆದೊಂದು ದಶಕದಲ್ಲೇ ಮೊದಲು ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದು, ಇದು ಉಗ್ರರ ಕೈಗೆ ಹೇಗೆ ಸಿಕ್ಕಿತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಇಷ್ಟೊಂದು ಪ್ರಮಾಣದಲ್ಲಿ ಶಕ್ತಿ ಶಾಲಿ ಆರ್‌ಡಿಎಕ್ಸ್ ಸ್ಫೋಟಕ ಸಿಡಿದಿದ್ದರಿಂದ ಉಂಟಾದ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಯೋಧನೊಬ್ಬನ ದೇಹವು ಸುಮಾರು 80 ಮೀಟರ್‌ನಷ್ಟು ದೂರ ಹಾರಿ ಹೋಗಿ ಬಿದ್ದಿತ್ತು ಎಂದೂ ಅಧಿಕಾರಿಗಳು ಹೇಳಿ ದ್ದಾರೆ. 

ಉಗ್ರರು ದಾಳಿ ಎಸಗಿದ ಪುಲ್ವಾಮಾದಲ್ಲಿರುವ ಸ್ಥಳಕ್ಕೆ ಶುಕ್ರವಾರ ವಿಧಿವಿಜ್ಞಾನ ತಜ್ಞರ ತಂಡ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ತಂಡಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದವು. ಈ ವೇಳೆ ಈ ಎಲ್ಲ ಅಂಶಗಳು ಪತ್ತೆಯಾಗಿವೆ.