ಅದು ನವೆಂಬರ್ 26, 2008... ಭಾರತದ ವಾಣಿಜ್ಯ ರಾಜ್ಯಧಾನಿ ಮುಂಬೈಗೆ ನುಗ್ಗಿದ ಪಾತಕಿಗಳು ತಾಜ್ ಹೋಟೆಲ್ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ಮಾಡಿ 166 ಜೀವ ಬಲಿ ಪಡೆದಿದ್ದರು. ನಡೆದು 8 ವರ್ಷ ಕಳೆದರೂ ಆ ಕರಾಳ ಘಟನೆ ಈಗಲೂ ಬೆಚ್ಚಿ ಬೀಳಿಸುತ್ತದೆ. ಅಂತಹ ಭಯಾನಕ ದಾಳಿಯನ್ನ ಮತ್ತೊಮ್ಮೆ ನೆನಯೋದಾದ್ರೆ...
ಮುಂಬೈಯನ್ನು ನವೆಂಬರ್ 26, 2008ರಂದು ಮುಂಬೈ ಜನ ನಿದ್ದೆಗೆ ಜಾರಲು ತಯಾರಿ ನಡೆಸಿದ್ದಾಗ ಪಾಕಿಸ್ತಾನದ ಹತ್ತು ಉಗ್ರರು ಸಮುದ್ರದ ಮುಖಾಂತರ ನುಸುಳಿ ಮನಯೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ಅಲ್ಲದೇ ಹೋಟೆಲ್'ಗೆ ನುಗ್ಗಿ ರಣಕೇಕೆ ಹಾಕಿದ್ದರು. ಸತತ ಮೂರು ದಿನಗಳ ಕಾಲ 166 ಅಮಾಯಕರನ್ನ ನಿರ್ದಯವಾಗಿ ಹತ್ಯೆ ಮಾಡಿದ್ದರು. ಘಟನೆ ನಡೆದು ಇಂದಿಗೆ ಬರೋಬ್ಬರಿ ಎಂಟು ವರ್ಷ ಕಳೆದಿದೆ. ದಾಳಿಯಲ್ಲಿ ಮಡಿದವರ ಕುಟುಂಬದವರು ತಮ್ಮ ನೋವನ್ನ ಮರೆಯಲು ಇನ್ನೂ ಪ್ರಯತ್ನಿಸುತ್ತಲೇ ಇದ್ದಾರೆ.
ಎನ್‌ಕೌಂಟರ‍್ ಸ್ಪೆಷಲಿಸ್ಟ್ ವಿಜಯ್ ಸಲಾಸ್ಕರ್, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಹಾಗೂ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಉಗ್ರರನ್ನು ಸದೆಬಡಿದಿದ್ದರು. ಇಂದಿಗೂ ಹುತಾತ್ಮರ ಕುಟುಂಬಗಳು ಈ ನೋವಿನಿಂದ ಹೊರಬರಲು ಪಡಿಪಾಟಲು ಪಡುತ್ತಿವೆ ಅನ್ನೋದೇ ದುರಂತ.
ವೀರ ಯೋಧರು ತಮ್ಮ ಪ್ರಾಣವನ್ನು ದೇಶದ ಜನರಿಗಾಗಿ ಅರ್ಪಣೆ ಮಾಡಿ ನಾಳೆಗೆ ಎಂಟು ವರ್ಷಗಳು ಕಳೆದಿವೆ. ವೀರ ಸೇನಾನಿಗಳ ನೆನಪು ನಮ್ಮೆಲ್ಲರನ್ನು ಕಾಡುತ್ತಿರುವಾಗ ಉಗ್ರರ ಕರಿ ಛಾಯೆಯ ಭಯಾನಕ ದಾಳಿಯೂ ಕೂಡ ನಮ್ಮ ಕಣ್ಮುಂದೆ ಬಂದು ಹೋಗುತ್ತೆ. ಕಣ್ಣಾಲಿಗಳು ತೇವಗೊಂಡು ಪಾಕಿಸ್ತಾನ ಹಾಗೂ ಉಗ್ರರು ಎಂದಾಕ್ಷಣ ನರನಾಡಿಗಳು ಹುರಿಗೊಳ್ತವೆ. ಮುಂದೆಂದೂ ಇಂತಹ ದುರ್ಘಟನೆ ನಡೆದು ಶ್ರೀಸಾಮಾನ್ಯನ ಮಾರಣಹೋಮ ನಡೆಯದಿರಲಿ ಎಂದು ಮೊರೆ ಇಡುವಂತಾಗಿದೆ.
- ಗುರುಪ್ರಸಾದ್ ಎನ್.ಜೆ., ನ್ಯೂಸ್ ಡೆಸ್ಕ್, ಸುವರ್ಣನ್ಯೂಸ್
