ಮಂಗಳೂರು(ಆ.18): ಕೇರಳಕ್ಕೆ ಪ್ರಾರ್ಥನೆಗೆ ತೆರಳಿದ ಮಂಗಳೂರಿನ 8 ಮಂದಿ ಪ್ರವಾಹಕ್ಕೆ ಸಿಲುಕಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಎನ್ನುವ ವಿಚಾರ ಇನ್ನು ಸ್ಪಷ್ಟವಾಗಿಲ್ಲ.

ಮಂಗಳೂರು ಹೊರವಲಯದ ಮುಡಿಪು ನಿವಾಸಿಗಳಾದ ಈ 8 ಮಂದಿ ಕುಟುಂಬ ಸಮೇತ ಇತ್ತೀಚೆಗೆ ಕೇರಳದ ಡಿವೈನ್‌ ರಿಟ್ರೀಟ್‌ ಸೆಂಟರ್‌ಗೆ ಪ್ರಾರ್ಥನೆಗಾಗಿ ತೆರಳಿದ್ದರು. ಗುರುವಾರವರೆಗೆ ಮನೆ ಮಂದಿಯ ಸಂಪರ್ಕದಲ್ಲಿದ್ದ ಈ 8 ಮಂದಿ ಶುಕ್ರವಾರದಿಂದ ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಈ ರಿಟ್ರೀಟ್‌ ಸೆಂಟರ್‌ ಕೇರಳದ ತ್ರಿಶ್ಶೂರಿನ ಮುರಿಂಗೂರು ಎಂಬಲ್ಲಿದೆ. ತ್ರಿಶ್ಶೂರು ಸುತ್ತಮುತ್ತ ಕೂಡ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಹೊರಗಿನ ಸಂಪರ್ಕವನ್ನು ಈ ಪ್ರದೇಶ ಕಡಿದುಕೊಂಡಿದೆ. ಹಾಗಾಗಿ ಈ 8 ಮಂದಿಯ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕುಟುಂಬಸ್ಥರಾದ ಸುನೀತಾ ತಿಳಿಸಿದ್ದಾರೆ.

ಈ 8 ಮಂದಿಯ ಪತ್ತೆಗೆ ನೆರವಾಗುವಂತೆ ಅವರ ಕುಟುಂಬ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಮಾಜಿ ಶಾಸಕ ಜೆ.ಆರ್‌.ಲೋಬೊ ಅವರನ್ನು ಸಂಪರ್ಕಿಸಿ ಸಹಾಯವನ್ನು ಯಾಚಿಸಿದೆ.