ಬಿಬಿಎಂಪಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಯಲ್ಲಿ ಮತಚಲಾಯಿಸುವ ಉದ್ದೇಶಕ್ಕಾಗಿ ನಕಲಿ ವಿಳಾಸ ನೀಡಿ ಮತದಾನದ ಹಕ್ಕು ಪಡೆದುಕೊಂಡಿರುವ 8 ವಿಧಾನಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಬಿಬಿಎಂಪಿ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ದೂರು ನೀಡಿದ್ದಾರೆ.

ಬೆಂಗಳೂರು(ಜೂ.10): ಬಿಬಿಎಂಪಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಯಲ್ಲಿ ಮತಚಲಾಯಿಸುವ ಉದ್ದೇಶಕ್ಕಾಗಿ ನಕಲಿ ವಿಳಾಸ ನೀಡಿ ಮತದಾನದ ಹಕ್ಕು ಪಡೆದುಕೊಂಡಿರುವ 8 ವಿಧಾನಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಬಿಬಿಎಂಪಿ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ದೂರು ನೀಡಿದ್ದಾರೆ.

ಕಾಂಗ್ರೆಸ್'ನ ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಆರ್.ಬಿ. ತಿಮ್ಮಾಪುರ, ಎನ್. ಎಸ್. ಬೋಸರಾಜ್, ಎಂ.ಡಿ. ಲಕ್ಷ್ಮಿನಾರಾಯಣ ಹಾಗೂ ಜೆಡಿಎಸ್ನ ಅಪ್ಪಾಜಿ ಗೌಡ ಮತ್ತು ಸಿ.ಆರ್. ಮನೋಹರ್ ಅವರು ಅಕ್ರಮವಾಗಿ ವಿಧಾನ ಪರಿಷತ್ನಿಂದ ಪ್ರಯಾಣ ಭತ್ಯೆಯನ್ನು ಪಡೆದಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕಾಗಿ ವಾಮ ಮಾರ್ಗ ಅನುಸರಿಸಿದ್ದಾರೆ ಎಂದು ಪದ್ಮನಾಭ ರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ.

ಇತ್ತೀಚೆಗೆ ವಿಧಾನಪರಿಷತ್ ಸಭಾಪತಿಗೂ ರೆಡ್ಡಿ ದೂರು ನೀಡಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ಗೆ ಸಂಖ್ಯಾಬಲವಿಲ್ಲದ ಕಾರಣ ಬೇರೆ ಜಿಲ್ಲೆಯ ಮತದಾರರಾಗಿದ್ದ ವಿಧಾನ ಪರಿಷತ್ ಸದಸ್ಯರ ಮತದಾನದ ಹಕ್ಕನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದರು. ಆದರೆ, ಹೀಗೆ ಮತದಾನದ ಹಕ್ಕು ಬದಲಾವಣೆ ವೇಳೆ ನಕಲಿ ವಿಳಾಸವನ್ನು ನೀಡಲಾಗಿತ್ತು.

ಮೇಯರ್ ಆಯ್ಕೆ ನಂತರ ವಿಧಾನಪರಿಷತ್ ಸದಸ್ಯರಿಗೆ ನೀಡಲಾಗುವ ಪ್ರಯಾಣ ಭತ್ಯೆಯನ್ನು ಹೆಚ್ಚಾಗಿ ಪಡೆಯುವ ಸಲುವಾಗಿ ಪುನಃ ತಮ್ಮ ಹಳೆಯ ವಿಳಾಸಕ್ಕೆ ಮತದಾನದ ಹಕ್ಕು ಬದಲಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದು ಅಕ್ರಮವಾಗಿದ್ದು, ಕಾಂಗ್ರೆಸ್ನ 6 ಮತ್ತು ಜೆಡಿಎಸ್ನ 2 ವಿಧಾನಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.