ಅಜ್ಮೇರ್(ರಾಜಸ್ಥಾನ)​:  ಬಸ್​ ಮತ್ತು ಟ್ರ್ಯಾಕ್ಟರ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಜ್ಮೇರ್​ ಬಳಿ ನಡೆದಿದೆ.

ರಾಜ್​ಕೋಟ್​ಗೆ ತೆರಳುತ್ತಿದ್ದ ಬಸ್​​ ಅಜ್ಮೇರ್​ನ ಮಂಗಲಿಯವಾಸ್ ಲಮನಾ ಗ್ರಾಮದ ಬಳಿ  ಅಪಘಾತ ಸಂಭವಿಸಿದೆ.ಬಸ್​ನಲ್ಲಿ 60 ರಿಂದ 70 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಬಸ್​ ಓವರ್​ಟೇಕ್​ ಮಾಡಲು ಹೋಗಿ ಟ್ರ್ಯಾಕ್ಟರ್ನ ಟ್ರೇಲರ್​ಗೆ ಗುದ್ದಿದೆ ಎನ್ನುವುದು ಪ್ರತ್ಯಕ್ಷದರ್ಶಿಗಳ ಮಾತು.

ಘಟನೆಯಲ್ಲಿ  ಸುಮಾರು 30 ರಿಂದ 40 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಕೆಲವರನ್ನು ತಕ್ಷಣ ಜೆಎಲ್​ಎನ್​ ಆಸ್ಪತ್ರೆಗೆ ಆಂಬುಲೆನ್ಸ್​ ಸಹಾಯದಿಂದ ರವಾನಿಸಲಾಗಿದ್ದು, ಇನ್ನು ಕೆಲವರನ್ನು ಬೆವಾರ್​ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನಾ ಸ್ಥಳಕ್ಕೆ ಅಜ್ಮೇರ್​ನ ಪೊಲೀಸ್​ ವರಿಷ್ಠಾಧಿಕಾರಿ ಕುನ್ವಾರ್​ ರಾಷ್ಟ್ರದೀಪ್​ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಅಜ್ಮೇರ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ.