ನೋಟು ಅಮಾನ್ಯದ ಕ್ರಮದ ಬಳಿಕ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ಬದಲಾವಣೆ ನೆಪದಲ್ಲಿ ಉದ್ಯಮಿ ಮನೆಗೆ ನುಗ್ಗಿ ಸರ್ವಿಸ್ ಪಿಸ್ತೂಲ್ ಹಾಗೂ ಗುರುತಿನ ಚೀಟಿ ತೋರಿಸಿ 35.50 ಲಕ್ಷ ಹಣ ದರೋಡೆ ಮಾಡಿದ್ದರು.
ಬೆಂಗಳೂರು(ಡಿ.14): ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಹಣ ಬದಲಾವಣೆ ನೆಪದಲ್ಲಿ ಲಕ್ಷಾಂತರ ರುಪಾಯಿ ದರೋಡೆ ಮಾಡಿ ಸಿಕ್ಕಿ ಬಿದ್ದು ಜೈಲುಪಾಲಾಗಿದ್ದ ಒಬ್ಬ ಪಿಎಸ್‌ಐ ಸೇರಿ 8 ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಖ್ ಬುಧವಾರ ಆದೇಶಿಸಿದ್ದಾರೆ.
ಪಿಎಸ್‌ಐ ಎನ್.ಸಿ.ಮಲ್ಲಿಕಾರ್ಜುನ್, ಕಾನ್ಸ್‌ಟೆಬಲ್‌ಗಳಾದ ಮಂಜುನಾಥ್ ಮುಗೋದ್, ಎಲ್.ಕೆ. ಗಿರೀಶ್, ಚಂದ್ರಶೇಖರ್, ಅನಂತರಾಜು, ಹೆಡ್‌ಕಾನ್ಸ್‌ಟೆಬಲ್ ಮಯೂರ, ರಾಘವ ಕುಮಾರ್ ಮತ್ತು ಸಿಸಿಬಿ ವಿಭಾಗದ ಕಾನ್ಸ್‌ಟೆಬಲ್ ಬಿ.ಶೇಷಾ ಅವರನ್ನು ಭಾರತೀಯ ಸಂವಿಧಾನದ ಕಲಂ 311(2)(ಬಿ)ಅಡಿ ಸೇವೆಯಿಂದ ವಜಾಗೊಳಿಸಲಾಗಿದೆ.
ನೋಟು ಅಮಾನ್ಯದ ಕ್ರಮದ ಬಳಿಕ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ಬದಲಾವಣೆ ನೆಪದಲ್ಲಿ ಉದ್ಯಮಿ ಮನೆಗೆ ನುಗ್ಗಿ ಸರ್ವಿಸ್ ಪಿಸ್ತೂಲ್ ಹಾಗೂ ಗುರುತಿನ ಚೀಟಿ ತೋರಿಸಿ 35.50 ಲಕ್ಷ ಹಣ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ, ದರೋಡೆಯಲ್ಲಿ ಭಾಗಿಯಾಗಿದ್ದ ಇಬ್ಬರು ಪೊಲೀಸ್ ಮಾಹಿತಿದಾರರನ್ನು ಪೀಣ್ಯ ಪೊಲೀಸರು ಬಂಧಿಸಿದ್ದರು. ಇವರು ನೀಡಿದ ಮಾಹಿತಿ ಮೇರೆಗೆ ಕಲಾಸಿಪಾಳ್ಯ ಠಾಣೆಯ ಪಿಎಸ್‌ಐ ಎನ್.ಸಿ.ಮಲ್ಲಿಕಾರ್ಜುನ್, ಕಾನ್ಸ್‌ಟೆಬಲ್‌ಗಳಾದ ಮಂಜುನಾಥ್ ಮುಗೋದ್, ಎಲ್.ಕೆ. ಗಿರೀಶ್, ಚಂದ್ರಶೇಖರ್, ಅನಂತರಾಜು ಎಂಬುವರನ್ನು ಬಂಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇನ್ನು ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಕೀಲೆ ಇಬ್ಬರಿಂದ 8 ಲಕ್ಷ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಠಾಣೆಯ ಹೆಡ್‌ಕಾನ್ಸ್‌ಟೆಬಲ್ ಮಯೂರ ಮತ್ತು ರಾಘವೇಂದ್ರ ಅವರನ್ನು ಹಾಗೂ ಮಾಗಡಿ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ಬದಲಾವಣೆ ನೆಪದಲ್ಲಿ ಉದ್ಯಮಿಯನ್ನು ಅಪಹರಿಸಿ ಅವರಿಂದ 22.30 ಲಕ್ಷ ದರೋಡೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಸಿಸಿಬಿ ವಿಭಾಗದ ಕಾನ್ಸ್‌ಟೆನಲ್ ಬಿ.ಶೇಷಾ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
