ಉಡುಪಿ(ಡಿ.02): ಈಗ ಎಲ್ಲಿ ನೋಡಿದ್ರೂ ಅಕ್ರಮ ಹಣದ್ದೇ ಕಾರುಬಾರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 71 ಲಕ್ಷ ರೂಪಾಯಿಯಷ್ಟು 2000 ನೋಟುಗಳನ್ನ ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಕಡೆಯಿಂದ ಉಡುಪಿಯ ಮಾರ್ಗವಾಗಿ ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆ  ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾರ್ಕಳ ಪೊಲೀಸರು, ಕಾರನ್ನು ಅಡ್ಡಗಟ್ಟಿದಾಗ, ಅದರಲ್ಲಿದ್ದ ಮೂವರು ಯುವಕರ ಬಳಿ ಕಂತೆ ಕಂತೆ 2000 ರೂ ನೋಟುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಹಣಕ್ಕೆ ದಾಖಲೆ ಕೇಳಿದಾಗ ಯುವಕರು ತಬ್ಬಿಬ್ಬಾಗಿದ್ದಾರೆ. ತಕ್ಷಣವೇ ಮಂಗಳೂರಿನ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಣ ಹಾಗೂ ಆರೋಪಿಗಳನ್ನು ಹಸ್ತಾಂತರಿಸಲಾಗಿದೆ.

ಈ ಮೂವರೂ ಕಾಳಧನಿಕರ ಪರವಾಗಿ ಕೆಲಸ ಮಾಡುತ್ತಿದ್ದರೇ ಮದ್ಯವರ್ತಿಗಳೇ ಅನ್ನೋದು ತನಿಖೆಯಿಂದ ತಿಳಿಯಬೇಕಾಗಿದೆ.