18 ತಿಂಗಳ ಹಿಂದೆ ಹಾಸನ ಪೇಟೆಗೆ ಹೋಗಿದ್ದ 70ರ ವೃದ್ಧೆ ಜಯಮ್ಮ ನಿಗೂಢವಾಗಿ ನಾಪತ್ತೆಯಾಗಿದ್ದರು. ಇವರಿಗಾಗಿ ಹುಡುಕಾಟ ನಡೆಸಿ ನಿರಾಸೆಯಾಗಿದ್ದ ಕುಟುಂಬಕ್ಕೆ ಇದೀಗ ಹೊಸ ಚೈತನ್ಯ ಬಂದಿದೆ. ಕಣ್ಮರೆಯಾಗಿದ್ದ ಜಯಮ್ಮ ಬಾಂಗ್ಲಾ ಗಡಿ ಪ್ರದೇಶದ ಅಸ್ಸಾಂನಲ್ಲಿ ಪತ್ತೆಯಾಗಿದ್ದಾರೆ.

ಹಾಸನ(ಅ.24): ಇದು ಯಾವ ಸಿನಿಮಾ ಕತೆಗೂ ಕಮ್ಮಿಯಿಲ್ಲದ ಘಟನೆ. ನಾಪತ್ತೆಯಾಗಿ 18 ತಿಂಗಳ ಬಳಿಕ ಹಾಸನ ತಾಲೂಕಿನ ಮಾದಿಗಾನಹಳ್ಳಿಯ ಜಯಮ್ಮ ಪತ್ತೆಯಾಗಿದ್ದು, ದೂರದ ಅಸ್ಸಾಂನ ಕರೀಂಗಂಜ್‌ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಗಡಿಯಲ್ಲಿ! ಅಂದಹಾಗೆ ಈಕೆಯನ್ನು ಕುಟುಂಬದೊಂದಿಗೆ ಒಂದು ಮಾಡಿದ್ದು ಹಗಲಿರುಳು ನಮ್ಮ ದೇಶದ ಗಡಿ ಕಾಯುವ ಗಡಿ ಭದ್ರತಾ ಪಡೆಯ ಯೋಧರು!!

ಅಚ್ಚರಿ ಎನ್ನಿಸಿದರೂ ನೈಜ ಘಟನೆಯಿದು. ಒಂದೂವರೆ ವರ್ಷದ ಹಿಂದೆ ಮಾದಿಗಾನಹಳ್ಳಿ ಗ್ರಾಮದಲ್ಲಿ ಮಾರುಕಟ್ಟೆಗೆ ಹೋಗಿ ಬರುವುದಾಗಿ ನಾಪತ್ತೆಯಾಗಿದ್ದ 70ರ ಹರೆಯದ ಅಜ್ಜಿ ಜಯಮ್ಮ ಈಗ ಕುಟುಂಬದ ಮಡಿಲು ಸೇರಿದ್ದು, ಆಕೆಯನ್ನು ಕುಟುಂಬದವರು ಈಗ ಅಸ್ಸಾಂನಿಂದ ತವರಿಗೆ ಕರೆತಂದಿದ್ದಾರೆ.

"

ಅಂದಹಾಗೆ ಕನ್ನಡ ಬಿಟ್ಟು ಬೇರೇನೂ ಬಾರದ ಜಯಮ್ಮಳನ್ನು ಬಾಂಗ್ಲಾ ಗಡಿಯಲ್ಲಿ ಮಾತನಾಡಿಸಿ ಆಕೆಯನ್ನು ಕುಟುಂಬದೊಂದಿಗೆ ಒಂದಾಗುವಂತೆ ಮಾಡುವಲ್ಲಿ ಗಡಿಯಲ್ಲಿದ್ದ ಕನ್ನಡಿಗ ಬಿಎಸ್‌ಎಫ್‌ ಯೋಧ, ಹಾಸನ ಮೂಲದ ಸಾಹಿಲ್‌ ಜಬೀವುಲ್ಲಾ ಪಾತ್ರವೂ ಹಿರಿದಾಗಿದ್ದು, ಬಿಎಸ್‌ಎಫ್‌ ಬಗ್ಗೆ ಮೆಚ್ಚುಗೆಯ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಆಗಿದ್ದೇನು?: ಅಕ್ಟೋಬರ್‌ 18ರಂದು ಸಂಜೆ 5.30ರ ಸುಮಾರಿಗೆ ಅಸ್ಸಾಂನ ಕರೀಂಗಂಜ್‌ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಗಡಿಯ ಸುತರ್‌ಕಂಡಿ ಪೋಸ್ಟ್‌ನಲ್ಲಿ, 70 ವರ್ಷದ ವೃದ್ಧೆಯೊಬ್ಬರು ಏಕಾಂಗಿಯಾಗಿ ಕುಳಿತಿದ್ದು ಬಿಎಸ್‌ಎಫ್‌ ಯೋಧರಿಗೆ ಕಂಡು ಬಂದಿತು. ಆಗ ಈ ಮಹಿಳೆಯನ್ನು ಯಾರು, ಏನೆಂದು ಯೋಧರು ವಿಚಾರಿಸಿದಾಗ ಅರ್ಥವಾದ ಭಾಷೆಯಲ್ಲಿ ವೃದ್ಧೆ ಉತ್ತರಿಸಿದಳು. ಯೋಧರಿಗೆ ಈಕೆ ಏನು ಮಾತನಾಡುತ್ತಿದ್ದಾಳೆ ಎಂಬುದು ಅರ್ಥವಾಗಲಿಲ್ಲ. ಆದರೆ ಅದು ದಕ್ಷಿಣ ಭಾರತದ ಭಾಷೆ ಎಂದು ಮಾತ್ರ ಅರ್ಥವಾಯಿತು.

ಆಗ ಅಲ್ಲೇ ಅದೃಷ್ಟವಶಾತ್‌ ಇದ್ದ ಬಿಎಸ್‌ಎಫ್‌ ಕಾನ್‌ಸ್ಟೇಬಲ್‌, ಕರ್ನಾಟಕ ಮೂಲದ ಸಾಹಿಲ್‌ ಜಬೀವುಲ್ಲಾ ಅವರು ವೃದ್ಧೆ ಕನ್ನಡ ಮಾತನಾಡುತ್ತಿರುವುದನ್ನು ಕಂಡು, ಈಕೆ ಕರ್ನಾಟಕದವಳು ಎಂದು ಖಚಿತಪಡಿಸಿದರು. ಆಗ ಆಕೆಯ ಹೆಸರು ಕರ್ನಾಟಕದ ಹಾಸನ ಜಿಲ್ಲೆ, ಹಾಸನ ತಾಲೂಕಿನ ಮಾದಿಗಾನಹಳ್ಳಿಯ ಲಕ್ಷ್ಮೇಗೌಡರ ಹೆಂಡತಿ ಜಯಮ್ಮ ಎಂದು ತಿಳಿದುಬಂತು.

ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಾಹಿಲ್‌ ಜತೆ ಜಯಮ್ಮ ಮಾತನಾಡುತ್ತಿರುವುದನ್ನು ವಿಡಿಯೋ ಮಾಡಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟರು.

ಇದೇ ವೇಳೆ, ಬಿಎಸ್‌ಎಫ್‌ ಕಮಾಂಡರ್‌ ಒಬ್ಬರು ಹಾಸನ ಪೊಲೀಸರನ್ನು ಸಂಪರ್ಕಿಸಿದರು. ಆಗ ಹಾಸನ ಪೊಲೀಸರು ಮಾದಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌ ಎಂಬುವರನ್ನು ಕರೆತಂದು ಜಯಮ್ಮ-ಸಂತೋಷ್‌ರ ಆನ್‌ಲೈನ್‌ ವಿಡಿಯೋ ಸಂವಾದ ಏರ್ಪಡಿಸಿದರು. ಸಂತೋಷ್‌ ಅವರು ಈಕೆ ಜಯಮ್ಮನೇ ಎಂದು ಗುರುತು ಪತ್ತೆ ಮಾಡಿ, ಜಯಮ್ಮನ ಪುತ್ರಿ ಸುನಂದಾಗೆ ಈ ವಿಷಯವನ್ನು ತಿಳಿಸಿದರು.

ಬಳಿಕ ಬಿಎಸ್‌ಎಫ್‌ ಅಧಿಕಾರಿಗಳು ಸುನಂದಾ ಹಾಗೂ ಜಯಮ್ಮನ ವಿಡಿಯೋ ಸಂವಾದವನ್ನೂ ಏರ್ಪಡಿಸಿದರು. ‘ಈಕೆ ನಮ್ಮಮ್ಮ ಜಯಮ್ಮ’ ಎಂದು ಸುನಂದಾ ಖಚಿತಪಡಿಸಿದರು. ಆಗ ಏರ್ಪಟ್ಟವಿಡಿಯೋ ಸಂವಾದದಲ್ಲಿನ ದೃಶ್ಯಗಳು ಯಾವ ಸಿನಿಮಾ ದೃಶ್ಯಾವಳಿಗೂ ಕಮ್ಮಿ ಇರಲಿಲ್ಲ. ಅಷ್ಟೊಂದು ಭಾವನಾತ್ಮಕವಾಗಿತ್ತು.

‘18 ತಿಂಗಳ ಹಿಂದೆಯೇ ಜಯಮ್ಮ ಪೇಟೆಗೆ ಹೋಗಿಬರುವುದಾಗಿ ಹೇಳಿ ಊರಿನಿಂದ ನಾಪತ್ತೆಯಾಗಿದ್ದರು. ಬಳಿಕ ಎಲ್ಲಿದ್ದಾರೋ ಗೊತ್ತಿರಲಿಲ್ಲ’ ಎಂದು ಸುನಂದಾ ಅವರು ಈ ವೇಳೆ ತಿಳಿಸಿದರು ಎಂದು ‘ಕನ್ನಡಪ್ರಭ’ದ ಜತೆ ಬಿಎಸ್‌ಎಫ್‌ ಡಿಐಜಿ ಜೆ.ಸಿ. ನಾಯಕ್‌ ಮಾಹಿತಿ ಹಂಚಿಕೊಂಡರು.

ಈ ನಡುವೆ, ಸುನಂದಾ ಅವರಿಗೆ ಅಸ್ಸಾಂಗೆ ಬಿಎಸ್‌ಎಫ್‌ ಅಧಿಕಾರಿಗಳು ಬರಹೇಳಿದರು. ವಿಮಾನದ ಮೂಲಕ ಬೆಂಗಳೂರಿನಿಂದ ಅಸ್ಸಾಂಗೆ ಆಗಮಿಸಿದ ಸುನಂದಾ ಅ.22ರಂದು ಸುತರ್‌ಕಂಡಿ ಗಡಿಗೆ ತಲುಪಿದರು. 22ರ ಮಧ್ಯಾಹ್ನ 1 ಗಂಟೆಗೆ 18 ತಿಂಗಳ ಬಳಿಕ ತಾಯಿಯ ಜತೆ ಸುನಂದಾ ಅವರ ಮಿಲನವಾಯಿತು. ಅದು ಭಾವನಾತ್ಮಕ ಸನ್ನಿವೇಶವಾಗಿತ್ತು. ಈ ಎಲ್ಲ ಸನ್ನಿವೇಶಕ್ಕೆ ಸಾಕ್ಷಿಯಾದ ಕನ್ನಡಿಗ ಯೋಧ ಸಾಹಿಲ್‌ ಜಬೀವುಲ್ಲಾ, ಕರೀಂಗಂಜ್‌ವರೆಗೂ ತಾಯಿ-ಮಗಳನ್ನು ಕಳಿಸಿ ಬೀಳ್ಕೊಟ್ಟರು. ಜಬೀವುಲ್ಲಾ ಕೂಡ ಹಾಸನದವರೇ ಎಂಬುದು ವಿಶೇಷ.

ಜಯಮ್ಮ ಅಸ್ಸಾಂನಲ್ಲಿ ತಂಗಿದ 4 ದಿವಸಗಳ ಅವಧಿಯಲ್ಲಿ ಬಿಎಸ್‌ಎಫ್‌ನ ‘07 ಬೆಟಾಲಿಯನ್‌’ ವತಿಯಿಂದ ಆಕೆಗೆ ಉಡುಗೆ-ತೊಡುಗೆ, ಉತ್ತಮ ವಸತಿ ವ್ಯವಸ್ಥೆ, ಬೆಚ್ಚನೆಯ ಉಡುಪು ನೀಡಿ ಕಾಳಜಿ ವಹಿಸಲಾಯಿತು. ಬಿಎಸ್‌ಎಫ್‌ ಮಾನವೀಯತೆ ಹಾಗೂ ಕಾಳಜಿಯಿಂದ ಒಂದೂವರೆ ವರ್ಷದ ಬಳಿಕ ಕುಟುಂಬದೊಂದಿಗೆ ವೃದ್ಧೆಯ ಮಿಲನವಾಯಿತು. ಇದಕ್ಕಾಗಿ ಯೋಧರನ್ನು ಕುಟುಂಬದವರು ಅಭಿನಂದಿಸಿದರು ಎಂದು ಡಿಐಜಿ ನಾಯಕ್‌ ಹರ್ಷಿಸಿದರು.

‘ಕನ್ನಡಪ್ರಭ’ದ ಜತೆ ಮಾತನಾಡಿದ ಜಯಮ್ಮ ಪುತ್ರಿ ಸುನಂದಾ, ‘ಸದ್ಯ ತಾಯಿಗೆ ಅನಾರೋಗ್ಯವಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಊರಿಗೆ ಕರೆದೊಯ್ಯಲಿದ್ದೇವೆ. ಪೇಟೆಗೆ ಹೋಗೋದಾಗಿ ಹೇಳಿ ನಾಪತ್ತೆಯಾಗಿದ್ದ ನಮ್ಮಮ್ಮ ಹೇಗೆ ಅಸ್ಸಾಂಗೆ ಹೋದರೆಂದು ಗೊತ್ತಿಲ್ಲ’ ಎಂದರು.

ಹಾಸನದಿಂದ ಅಸ್ಸಾಂಗೆ ಹೋಗಿದ್ಹೇಗೆ?

18 ತಿಂಗಳ ಹಿಂದೆಯೇ ಊರಿನಿಂದ ನಾಪತ್ತೆಯಾಗಿದ್ದ ಜಯಮ್ಮ ಬೆಂಗಳೂರಿಗೆ ಬಂದಿರಬಹುದು. ಬೆಂಗಳೂರಿನಿಂದ ಅಗರ್ತಲಾಗೆ ಹೋಗುವ ಹಮ್‌ಸಫರ್‌ ರೈಲನ್ನು ಅಕಸ್ಮಾತ್‌ ಏರಿ ಆಗಮಿಸಿರಬಹುದು. ಕನ್ನಡ ಬಿಟ್ಟು ಬೇರೆ ಭಾಷೆಯು ಜಯಮ್ಮನಿಗೆ ಬಾರದ ಕಾರಣ ಯಾರಿಗೂ ಭಾವನೆಗಳನ್ನು ಹೇಳಿಕೊಳ್ಳಲಾಗದೇ ಅಸ್ಸಾಂವರೆಗೆ ಬಂದಿರಬಹುದು ಎಂದು ಬಿಎಸ್‌ಎಫ್‌ ಅಂದಾಜಿಸಿದೆ.

ಈ ನಡುವೆ ಬೆಂಗಳೂರಿಂದ ತ್ರಿಪುರಾದ ಅಗರ್ತಲಾಗೆ ಹೋಗುವ ರೈಲು ಹತ್ತುವ ಈಕೆ ಅಸ್ಸಾಂನ ಯಾವ ರೈಲು ನಿಲ್ದಾಣದಲ್ಲಿ ಇಳಿದಳು? ಅಲ್ಲಿಂದ ಕರೀಂಗಂಜ್‌ಗೆ ಹೇಗೆ ಹೋದಳು ಎಂಬ ಮಾಹಿತಿ ಲಭಿಸಿಲ್ಲ.

18 ತಿಂಗಳ ಹಿಂದೆ ಪೇಟೆಗೆ ಹೋಗುವುದಾಗಿ ಹೇಳಿ ಹೋದ ನಮ್ಮ ತಾಯಿ ಅಂದಿನಿಂದ ಪತ್ತೆ ಇರಲಿಲ್ಲ. ಅಸ್ಸಾಂಗೆ ಹೇಗೆ ಹೋದರೆಂದು ಗೊತ್ತಾಗಲಿಲ್ಲ. ಸದ್ಯ ನಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಮಾದಿಗಾನಹಳ್ಳಿಗೆ ಕರೆದೊಯ್ಯಲಿದ್ದೇವೆ ಎಂದು ಜಯಮ್ಮನ ಪುತ್ರಿ ಸುನಂದಾ ಹೇಳಿದ್ದಾರೆ.

ದೇವದತ್ತ ಜೋಶಿ