ನವದೆಹಲಿ [ಜು.16]: ಸಂಸತ್ತಿನ ಅತ್ಯಂತ ಪ್ರಮುಖ ಸಮಿತಿಗಳ ಪೈಕಿ ಒಂದಾದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ)ಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್‌ ಚಂದ್ರಶೇಖರ್‌, ರಾಜೀವ್‌ ಗೌಡ ಸೇರಿದಂತೆ 7 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

22 ಸದಸ್ಯರನ್ನು ಒಳಗೊಂಡ ಪಿಎಸಿಯಲ್ಲಿ 15 ಜನ ಲೋಕಸಭೆಯಿಂದಲೂ, 7 ಜನ ರಾಜ್ಯಸಭೆಯಿಂದಲೂ ಆಯ್ಕೆ ಮಾಡಲಾಗುತ್ತದೆ. ಲೋಕಸಭೆಯಲ್ಲಿ ಅತಿದೊಡ್ಡ ವಿಪಕ್ಷದ ನಾಯಕರೇ ಪಿಎಸಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. 

ರಾಜ್ಯಸಭೆಯಿಂದ ಪಿಎಸಿಗೆ ಆಯ್ಕೆಯಾದವರಲ್ಲಿ ಬಿಜೆಪಿಯ ಮೂವರು, ಕಾಂಗ್ರೆಸ್‌ನ ಇಬ್ಬರು, ಟಿಎಂಸಿ, ಶಿರೋಮಣಿ ಅಕಾಲಿದಳದ ತಲಾ ಒಬ್ಬೊಬ್ಬರು ಇದ್ದಾರೆ. ಸರ್ಕಾರದ ಒಟ್ಟು ಆದಾಯ ಮತ್ತು ವೆಚ್ಚವನ್ನು ಪರಿಶೀಲಿಸುವ ಕೆಲಸವನ್ನು ಈ ಸಮಿತಿ ಮಾಡುತ್ತದೆ.