ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ತವರು ಗೋರಖ್‌'ಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಮಾರಣಹೋಮವೇ ನಡೆದಿದೆ. ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯುಂಟಾಗಿ 48 ಗಂಟೆಗಳಲ್ಲಿ 30 ಮಕ್ಕಳು ಸಾವನ್ನಪ್ಪಿದ ಸುದ್ದಿ ಬೆನ್ನಲ್ಲೇ, ಶನಿವಾರ ಮತ್ತೆ ಮೂರು ಕಂದಮ್ಮಗಳು ಅಸುನೀಗಿವೆ. ಇದರ ಬೆನ್ನಲ್ಲೇ ಕಳೆದ 5 ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಒಟ್ಟು 63 ಮಕ್ಕಳು ಮೃತಪಟ್ಟಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ದೇಶಾದ್ಯಂತ ಕಳವಳ ಹಾಗೂ ಸರ್ಕಾರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಲಖನೌ(ಆ.13): ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ತವರು ಗೋರಖ್‌'ಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಮಾರಣಹೋಮವೇ ನಡೆದಿದೆ. ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯುಂಟಾಗಿ 48 ಗಂಟೆಗಳಲ್ಲಿ 30 ಮಕ್ಕಳು ಸಾವನ್ನಪ್ಪಿದ ಸುದ್ದಿ ಬೆನ್ನಲ್ಲೇ, ಶನಿವಾರ ಮತ್ತೆ ಮೂರು ಕಂದಮ್ಮಗಳು ಅಸುನೀಗಿವೆ. ಇದರ ಬೆನ್ನಲ್ಲೇ ಕಳೆದ 5 ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಒಟ್ಟು 63 ಮಕ್ಕಳು ಮೃತಪಟ್ಟಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ದೇಶಾದ್ಯಂತ ಕಳವಳ ಹಾಗೂ ಸರ್ಕಾರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರಿ ಸ್ವಾಮ್ಯದ ಬಾಬಾ ರಾಘವದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಆಮ್ಲಜನಕ ಕೊರತೆಯಿಂದಾಗಿ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿವೆ ಎನ್ನಲಾಗುತ್ತಿದ್ದರೂ, ಸರ್ಕಾರ ಇದನ್ನು ನಿರಾಕರಿಸಿದೆ.

ವೈದ್ಯರು- ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಮೆದುಳಿನ ಉರಿಯೂತದಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ಹೇಳಿರುವ ಸರ್ಕಾರ, ಆಮ್ಲಜನಕ ಪೂರೈಸುವ ಕಂಪನಿಗೆ ಬಾಕಿ ಉಳಿಸಿಕೊಂಡ ಆಸ್ಪತ್ರೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ.

ಈ ಪ್ರಕರಣದ ಬಗ್ಗೆ ಮೋದಿ ಕೂಡ ಅವಲೋಕನ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ ಯೋಗಿ ಆದಿತ್ಯನಾಥ್ ಅವರು ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಕೇಂದ್ರ ಸರ್ಕಾರ ಆಸ್ಪತ್ರೆಗೆ ತಂಡವೊಂದನ್ನು ರವಾನಿಸಿದೆ. ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ನೇತೃತ್ವದಲ್ಲಿ ಬಾಬಾ ರಾಘವ್ ದಾಸ್ ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ಸಿಗರ ತಂಡ ಪರಿಶೀಲನೆ ನಡೆಸಿದ್ದು, ಮಕ್ಕಳ ಸಾವಿಗೆ ಅತೀವ ದುಃಖ ವ್ಯಕ್ತಪಡಿಸಿ ದ್ದಾರೆ.

ಇದು ಆಸ್ಪತ್ರೆಯಲ್ಲ ವಧಾಗೃಹ: ಮೃತ ಮಗುವಿನ ತಂದೆ ಕಿಡಿ

‘ಇದು ಆಸ್ಪತ್ರೆಯಲ್ಲ ವಧಾಗೃಹ. ಎರಡು ಮಕ್ಕಳ ಮೃತ ದೇಹವನ್ನು ಒಯ್ದಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಮಕ್ಕಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ’. ಇದು ಮಕ್ಕಳ ಸರಣಿ ಸಾವಿಗೆ ಸಾಕ್ಷಿಯಾದ ಬಾಬಾ ರಾಘವ್ ದಾಸ್ ಆಸ್ಪತ್ರೆಯಲ್ಲಿ ತನ್ನ ನಾಲ್ಕು ದಿನದ ಕಂದಮ್ಮನನ್ನು ಕಳೆದುಕೊಂಡ ತಂದೆಯ ರೋದನ. ಗೋಪಾಲಕೃಷ್ಣ ಎನ್ನುವವರು ತಮ್ಮ ನಾಲ್ಕು ದಿನದ ಕಂದನನ್ನು ಅನಾರೋಗ್ಯದ ಕಾರಣ ಗುರುವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಮ್ಲಜನಕದ ಕೊರತೆಯಿಂದಾಗಿ ವೈದ್ಯರು ವೆಂಟಿಲೇಟರ್ ನೀಡಲು ನಿರಾಕರಿಸಿದರು

6 ವರ್ಷದಲ್ಲಿ 3000 ಮಕ್ಕಳ ಸಾವು!

ಗೋರಖ್‌ಪುರದ ಬಾಬಾ ರಾಘವ್ ದಾಸ್ ಆಸ್ಪತ್ರೆಯಲ್ಲಿ ಕಳೆದ ಆರು ವರ್ಷದಲ್ಲಿ 3000ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದಾರೆ. ಸೊಳ್ಳೆಯಿಂದ ಹರಡುವ ಮೆದುಳಿನ ಉರಿಯೂತ ಕಾಯಿಲೆಯಿಂದ ಪೂರ್ವ ಉತ್ತರ ಪ್ರದೇಶದ ವಿವಿಧ ಆಸ್ಪತ್ರೆಗಳಲ್ಲಿ ಕಳೆದ ಮೂರು ದಶಕಗಳಲ್ಲಿ 50,000ಕ್ಕೂ ಹೆಚ್ಚು ಮಕ್ಕಳು ಅಸುನೀಗಿದ್ದಾರೆ.

63 ಲಕ್ಷ ಬಾಕಿ ಉಳಿಸಿಕೊಂಡಿದ್ದರಿಂದ ದುರಂತ

ಗೋರಖ್‌'ಪುರ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಪುಷ್ಪಾ ಸೇಲ್ಸ್ ಕಂಪನಿಗೆ ಆಸ್ಪತ್ರೆಯ ಆಡಳಿತ ಮಂಡಳಿ 63 ಲಕ್ಷ ರು. ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಆ ಕಂಪನಿ ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇ ಅವಘಡಕ್ಕೆ ಕಾರಣ ಎಂದು ವರದಿಗಳು ತಿಳಿಸಿವೆ. ಆಮ್ಲಜನಕ ಪೂರೈಕೆಯನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ಮುಖ್ಯ ವೈದ್ಯ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದರು ಎಂಬ ಸಂಗತಿ ಕೂಡ ಬೆಳಕಿಗೆ ಬಂದಿದೆ.

ಘಟನೆಯಿಂದ ಎಚ್ಚೆತ್ತ ಆಸ್ಪತ್ರೆಯ ಆಡಳಿತ ಮಂಡಳಿ 20 ಲಕ್ಷ ರು.ಗಳನ್ನು ಕಂಪನಿಗೆ ಸಂದಾಯ ಮಾಡಿದ್ದರಿಂದ ಆಮ್ಲಜನಕ ಸರಬರಾಜು ಪುನಾರಂಭಗೊಂಡಿದೆ.