Asianet Suvarna News Asianet Suvarna News

ಬಂಡೀಪುರ ಅಭಯಾರಣ್ಯಕ್ಕೆ 600 ಕ್ಯಾಮರಾ ಕಣ್ಗಾವಲು!

ಬಂಡೀಪುರ ಅಭಯಾರಣ್ಯಕ್ಕೆ 600 ಕ್ಯಾಮರಾ ಕಣ್ಗಾವಲು!| ಹುಲಿ ಗಣತಿಗೆ ಅಳವಡಿಸಿದ ಕ್ಯಾಮೆರಾ ತೆಗೆಯದಿರಲು ನಿರ್ಧಾರ | ಬೇಟೆಗಾರರು, ಅರಣ್ಯ ಸಿಬ್ಬಂದಿಯ ಚಲನವಲನದ ಮೇಲೆ ನಿಗಾ

600 Camera Will To Be fixed In Bandipur reserve Forest
Author
Bangalore, First Published Aug 22, 2019, 8:40 AM IST

ಬೆಂಗಳೂರು[ಆ.22]: ಬಂಡೀಪುರ ಅಭಯಾರಣ್ಯದಲ್ಲಿ ಹುಲಿ ಗಣತಿಗಾಗಿ ಬಳಕೆ ಮಾಡಿದ್ದ 600 ಕ್ಯಾಮೆರಾಗಳನ್ನು ಶಾಶ್ವತವಾಗಿ ಅರಣ್ಯದಲ್ಲಿಯೇ ಅಳವಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಇತ್ತೀಚೆಗೆ ನಡೆದ ಹುಲಿ ಗಣತಿ ಕಾರ್ಯಚರಣೆ ವೇಳೆ ಬಳಸಲಾದ ಈ ಕ್ಯಾಮೆರಾಗಳನ್ನು ಪ್ರಸ್ತುತ ಯಾವ ಕಾರ್ಯಕ್ಕೂ ಬಳಸುತ್ತಿಲ್ಲ. ಈ ಕ್ಯಾಮೆರಾಗಳನ್ನು ಸಂಗ್ರಹಿಸಿಡುವ ಬದಲು ಬಂಡೀಪುರ ಅರಣ್ಯದಲ್ಲಿ ಬೇಟೆಗಾರರು ಹಾಗೂ ತಮ್ಮ ಸಿಬ್ಬಂದಿಯ ಕಾರ್ಯನಿರ್ವಹಣೆ ಮೇಲೆ ನಿಗಾವಹಿಸಲು ಬಳಸಲು ಇಲಾಖೆ ತೀರ್ಮಾನಿಸಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 140ಕ್ಕೂ ಹೆಚ್ಚು ಹುಲಿಗಳಿವೆ. ಅವುಗಳ ಪತ್ತೆಗೆ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದೀಗ ಅದೇ ಕ್ಯಾಮೆರಾಗಳನ್ನು ಅರಣ್ಯದ ಮಧ್ಯಭಾಗಗಳಲ್ಲಿ ಅಳವಡಿಸುತ್ತಿದ್ದು, ಅಮೂಲ್ಯವಾದ ಅರಣ್ಯ ಸಂಪತ್ತು, ವನ್ಯಜೀವಿಗಳ ರಕ್ಷಣೆ ಸಹಕಾರಿಯಾಗಲಿದೆ. ಜೊತೆಗೆ ಅರಣ್ಯ ಅಪರಾಧಗಳನ್ನು ತಡೆಯುವುದು ಮತ್ತು ಕಾಡುಗಳ್ಳರ ಪತ್ತೆಗೆ ಸಹಕಾರಿಯಾಗಲಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರರು ಹಣಕ್ಕಾಗಿ ವನ್ಯಜೀವಿಗಳನ್ನು ಹತ್ಯೆ ಮಾಡುವ ಪ್ರಕರಣಗಳು ಕಂಡು ಬಂದಿವೆ. ಜೊತೆಗೆ ಅತ್ಯಂತ ಹೆಚ್ಚು ಬೆಲೆ ಬಾಳುವ ಮರಗಳ ಕಳ್ಳತನವೂ ನಡೆಯುತ್ತಿದೆ. ಇಂತಹ ಕೃತ್ಯ ತಡೆಯಲು ಇಲಾಖೆಯ ಸಿಬ್ಬಂದಿ ಸಾಕಷ್ಟುಯಶಸ್ವಿಯಾಗಿದ್ದರೂ ಬೃಹತ್‌ ವಿಸ್ತೀರ್ಣದ ಅರಣ್ಯದಲ್ಲಿ ಕೆಲವು ಸಾರಿ ಅರಣ್ಯಗಳ್ಳರ ಪತ್ತೆ ಮಾಡುವುದು ಕಷ್ಟಕರವಾಗಿತ್ತು. ಆದ್ದರಿಂದ ಕ್ಯಾಮೆರಾಗಳನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

600 ಕ್ಯಾಮೆರಾ ಅಳವಡಿಕೆ:

ಬಂಡೀಪುರ ಅಭಯಾರಣ್ಯ ಸುಮಾರು 874 ಚದರ ಕಿಲೋಮೀಟರ್‌ ವ್ಯಾಪ್ತಿಯನ್ನು ಹೊಂದಿದೆ. ಈ ಬೃಹತ್‌ ವಿಸ್ತೀರ್ಣದ ಅರಣ್ಯದಲ್ಲಿ ಯಾವ ಭಾಗದಲ್ಲಿ ಏನು ನಡೆಯುತ್ತಿದೆ ಎಂದು ಪತ್ತೆಹಚ್ಚುವುದು ಕಷ್ಟಸಾಧ್ಯ. ಆದ್ದರಿಂದ ಕೆಲವು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಅವುಗಳಲ್ಲಿ ದಾಖಲಾಗುವ ಛಾಯಾಚಿತ್ರಗಳ ಆಧಾರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಅಲ್ಲದೆ,ಗ್ರಾಮಗಳತ್ತ ನುಗ್ಗುವ ಕಾಡು ಪ್ರಾಣಿಗಳನ್ನು ಪತ್ತೆ ಮಾಡಬಹುದು. ಇದರಿಂದ ಮಾನವ ಪ್ರಾಣಿ ಸಂಘರ್ಷವನ್ನೂ ತಡೆಯಲು ಸಹಕಾರಿ ಎಂದು ಅವರು ತಿಳಿಸಿದರು.

ಕ್ಯಾಮೆರಾಗೆ ಹೆಚ್ಚು ವೆಚ್ಚವಿಲ್ಲ:

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಸಮೀಕ್ಷೆಗೆ ಹಳೆಯ ಕ್ಯಾಮೆರಾಗಳು ಹಾಗೂ ಸುಧಾರಿತ ತಂತ್ರಜ್ಞಾನವುಳ್ಳ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಕೇವಲ ಬ್ಯಾಟರಿ(ಸೆಲ್‌)ಗಳನ್ನು ಮಾತ್ರ ಬದಲಾವಣೆ ಮಾಡುತ್ತೇವೆ. ಇದೀಗ ಅದೇ ಬ್ಯಾಟರಿಗಳನ್ನು ಬದಲಾಯಿಸಿ ಅರಣ್ಯದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಪತ್ತೆಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

Follow Us:
Download App:
  • android
  • ios