Asianet Suvarna News Asianet Suvarna News

ಸಿಎಂ ಬಿಚ್ಚಿಟ್ಟ ಸಾಲಮನ್ನಾದ ಮೊತ್ತವೆಷ್ಟು..?

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಾಲಮನ್ನಾದ ಮೊತ್ತವನ್ನು ತಿಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ. 

60 k Farmers Benefited From Farm Loan Says CM HD Kumaraswamy
Author
Bengaluru, First Published Dec 31, 2018, 7:39 AM IST

ಬೆಂಗಳೂರು :  ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯು ರಾಜ್ಯ ರೈತರು ಸೇರಿದಂತೆ ಇಡೀ ದೇಶದ ಜನರ ದಾರಿ ತಪ್ಪಿಸುವಂತಿದ್ದು, ಇಂತಹ ಹೇಳಿಕೆ ಅತ್ಯಂತ ದುರದೃಷ್ಟಕರ ಮತ್ತು ದೇಶದ ದೌರ್ಭಾಗ್ಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದಲ್ಲಿ ಈವರೆಗೆ ಕೇವಲ 800 ರೈತರ ಸಾಲ ಮನ್ನಾ ಮಾಡಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಪದೇ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಂಕಿ-ಅಂಶ ಸಮೇತ ಉತ್ತರ ನೀಡಿರುವ ಕುಮಾರಸ್ವಾಮಿ, ‘ಈವರೆಗೆ ಸುಮಾರು 60 ಸಾವಿರ ರೈತರ 350 ಕೋಟಿ ರು. ಸಾಲ ಮನ್ನಾದ  ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವಿದ್ಯುನ್ಮಾನ ಮಾದರಿಯಲ್ಲಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಪ್ರತಿ ವಾರ ಸಾಲ ಮನ್ನಾದ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ವಿದ್ಯುನ್ಮಾನ ಮಾದರಿಯಲ್ಲಿ ತುಂಬಲಾಗುತ್ತಿದೆ. ಮುಂದಿನ ವಾರದಲ್ಲಿ ಇನ್ನೂ 1 ಲಕ್ಷ ರೈತರಿಗೆ 400 ಕೋಟಿ ರು. ಅವರ ಖಾತೆಗೆ ಜಮೆ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದ ಸುಮಾರು 21 ಲಕ್ಷ  ರೈತರ ಪೈಕಿ 8.5 ಲಕ್ಷ ರೈತರು ತಮ್ಮ ಆಧಾರ್, ರೇಷನ್ ಕಾರ್ಡ್ ಮತ್ತು ಪಹಣಿಯ ಮಾಹಿತಿಗಳನ್ನು ಒದಗಿಸಿದ್ದಾರೆ. ಈ ಪ್ರಕ್ರಿಯೆ 2019 ರ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ಅವಧಿಯೊಳಗೆ ಎಲ್ಲಾ ಅರ್ಹ ರೈತರನ್ನು ನೋಂದಾಯಿಸಲಾಗುವುದು. ಈ ಯೋಜನೆಯ ಪಾರದರ್ಶಕ ಮತ್ತು ಯಶಸ್ವಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯಂತ ಬದ್ಧತೆಯಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ’ ಎಂದಿದ್ದಾರೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಈ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇತರ ರಾಜ್ಯಗಳೂ ಮುಂದೆ ಬಂದಿವೆ. ಭೂ ದಾಖಲಾತಿಗಳ ಡಿಜಿಟಲ್ ದೃಢೀಕರಣ ಮತ್ತು ಪಡಿತರ ಚೀಟಿಯಿಂದ ಕೂಡಿರುವ ಸಾಲಮನ್ನಾ ಪ್ರಕ್ರಿಯೆ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ದುರುಪಯೋಗಕ್ಕೆ ಆಸ್ಪದ ನೀಡುವುದಿಲ್ಲ. ಅರ್ಹರ ರೈತರ ಖಾತೆಗೆ ಹಣ ಜಮೆಗೊಳ್ಳುತ್ತದೆ. ವಾಸ್ತವಾಂಶಗಳು ಕಣ್ಣು ಮುಂದೆಯೇ ಇದ್ದರೂ ಪ್ರಧಾನಿ ಹುದ್ದೆಯಲ್ಲಿರುವವರು ಜವಾಬ್ದಾರಿ ಮರೆತು ಲೇವಡಿಯಂತಹ ಹೇಳಿಕೆ ನೀಡುವುದು ಸರಿಯಲ್ಲ.  

ರಾಜ್ಯದ ರೈತರಿಗೆ ನೆರವಿಗೆ ಬರುವಂತೆ ಹಲವಾರು ಬಾರಿ ಮೇಲಿಂದ ಮೇಲೆ ಮನವಿ ಮಾಡಿದರೂ ಕೇಂದ್ರ ಸರ್ಕಾರ ಅದನ್ನು ಕಡೆಗಣಿಸಿತ್ತು. ಈಗ ರಾಜಕೀಯ ಲಾಭಕ್ಕಾಗಿ ದೇಶದ ಜನತೆಯ ದಿಕ್ಕುತಪ್ಪಿಸುವಂತಹ ಹೇಳಿಕೆ ನೀಡುವುದು ಬೇಸರದ ಸಂಗತಿ. ಹತಾಶೆಗೊಂಡಿದ್ದ ರೈತರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದಾಗಲೂ ಕೇಂದ್ರ ಸರ್ಕಾರ ದಿವ್ಯ ಮೌನ ವಹಿಸಿತ್ತು. ಈಗ ಏಕಾಏಕಿಯಾಗಿ ರಾಜ್ಯ ಕೈಗೊಂಡಿರುವ ಸಾಲಮನ್ನಾದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರವು ಸಂಕಷ್ಟದಲ್ಲಿರುವ ರೈತರನ್ನು ಕೈ ಹಿಡಿಯುತ್ತಿರುವ ಸರ್ಕಾರದ ಕ್ರಮವ ಬಗ್ಗೆಯೇ ವ್ಯಂಗ್ಯವಾಡಿರುವುದು ಅತ್ಯಂತ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜನರಿಗೆ ತಪ್ಪು ಹಾದಿಯ ದರ್ಶನ: ರಾಜ್ಯದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಮೈತ್ರಿ ಸರ್ಕಾರವು ಸಾಲಮನ್ನಾ ಅನುಷ್ಠಾನಗೊಳಿಸುತ್ತಿದೆ. ಸಾಲ ಮನ್ನಾ ಯೋಜನೆಯಲ್ಲಿ ಅಲ್ಪ ಸಮಯದಲ್ಲಿಯೇ ಗಣನೀಯ ಪ್ರಗತಿ ಸಾಧಿಸಲಾಗಿದೆ. ಹೀಗಾದ್ದರೂ ಪ್ರಧಾನಿಯವರು ವಾಸ್ತವ ಅರಿವಿಲ್ಲದೆ, ಸಾಲಮನ್ನಾ ಯೋಜನೆಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ಸಾಲಮನ್ನಾದ ಬಗ್ಗೆ ಲೇವಡಿ ಮಾಡಿದ್ದಾರೆ. ಈ ಮೂಲಕ ದೇಶದ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಇದು ಅತ್ಯಂತ ವಿಷಾದನೀಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಲಮನ್ನಾ ಯೋಜನೆಯು ತೆರೆದ ಪುಸ್ತಕದಂತಿದೆ. ಮೊದಲ ಬಾರಿಗೆ ಯೋಜನೆಯ ಮಾಹಿತಿಗಳು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಆನ್‌ಲೈನ್‌ನಲ್ಲಿ ಮುಕ್ತವಾಗಿ ಒದಗಿಸಲಾಗಿದೆ. ಯಾವ ರಾಜ್ಯದಲ್ಲಿಯೂ ಈವರೆಗೆ ಈ ವ್ಯವಸ್ಥೆ ರೂಪಿಸಿದ ನಿದರ್ಶನ ಇಲ್ಲ. ಸಾರ್ವಜನಿಕರ ಮತ್ತು ತೆರಿಗೆದಾರರ ಹಣ ಪೋಲಾಗದಂತೆ ಅತಿ ಎಚ್ಚರಿಕೆಯಿಂದ ಈ ಯೋಜನೆಯನ್ನು ಜಾರಿಗೊಳಿಸಿ ಅರ್ಹ ರೈತರಿಗೆ ಹಣ ಸೇರುವಂತೆ ಮಾಡಲಾಗಿದೆ. ಅರ್ಹ ರೈತನಿಗೆ ಈ ಯೋಜನೆಯ ಲಾಭ ದೊರೆಯುತ್ತದೆ ಎನ್ನುವುದಕ್ಕೆ ಖಾತ್ರಿ ಇದೆ. 

ಎಲ್ಲಾ ಮಧ್ಯವರ್ತಿಗಳು, ವಿಶೇಷವಾಗಿ ಸಹಕಾರಿ ವಲಯದ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios