ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದಿದ್ದ ಇಬ್ಬರು, ಸೋತಿದ್ದ ನಾಲ್ವರು ಈಗಿಲ್ಲ

First Published 15, Mar 2018, 9:55 AM IST
6 Political Leader Death
Highlights

ಅವಿಭಜಿತ ಮೈಸೂರು ಜಿಲ್ಲೆಯಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಇಬ್ಬರು, ಪರಾಭವಗೊಂಡಿದ್ದ ನಾಲ್ವರು ಈಗ ಬದುಕುಳಿದಿಲ್ಲ.

ಮೈಸೂರು : ಅವಿಭಜಿತ ಮೈಸೂರು ಜಿಲ್ಲೆಯಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಇಬ್ಬರು, ಪರಾಭವಗೊಂಡಿದ್ದ ನಾಲ್ವರು ಈಗ ಬದುಕುಳಿದಿಲ್ಲ.

ಅವರೆಂದರೆ ಕಾಂಗ್ರೆಸ್‌ ಸಚಿವರಾಗಿದ್ದ ಎಚ್‌.ಎಸ್‌.ಮಹದೇವಪ್ರಸಾದ್‌ (ಗುಂಡ್ಲುಪೇಟೆ), ಜೆಡಿಎಸ್‌ ಶಾಸಕರಾಗಿದ್ದ ಎಸ್‌.ಚಿಕ್ಕಮಾದು (ಎಚ್‌.ಡಿ.ಕೋಟೆ), ಜೆಡಿಎಸ್‌ನಿಂದ ಸ್ಪರ್ಧಿಸಿ, ಸೋತಿದ್ದ ಮಾಜಿ ಶಾಸಕ ಎಚ್‌.ಎಸ್‌.ಶಂಕರಲಿಂಗೇಗೌಡ (ಚಾಮರಾಜ), ಎಂ.ಸಿ.ಸುಂದರೇಶನ್‌ (ಟಿ.ನರಸೀಪುರ), ಕುಮಾರಸ್ವಾಮಿ (ಹುಣಸೂರು) ಹಾಗೂ ಬಿ.ಪಿ.ಮುದ್ದುಮಲ್ಲು (ಗುಂಡ್ಲುಪೇಟೆ). ಚಿಕ್ಕಮಾದು ಹಾಗೂ ಶಂಕರಲಿಂಗೇಗೌಡರು ಬಹುಅಂಗಾಂಗ ವೈಫಲ್ಯದಿಂದ, ಉಳಿದ ನಾಲ್ವರು ಹೃದಯಾಘಾತದಿಂದ ನಿಧನರಾದರು.

ಮಹದೇವಪ್ರಸಾದ್‌:

ಕಳೆದ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಹಕಾರ, ಸಕ್ಕರೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಎಸ್‌.ಮಹದೇವಪ್ರಸಾದ್‌ 2017ರ ಜ.3ರಂದು ತೀವ್ರ ಹೃದಯಾಘಾತದಿಂದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಬಳಿಯ ರೆಸಾರ್ಟ್‌ನಲ್ಲಿ ನಿಧನರಾದರು.

ಮಹದೇವಪ್ರಸಾದ್‌ ಅವರು 1985, 1989ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸೋತಿದ್ದರು. 1994ರಲ್ಲಿ ಜನತಾದಳ, 1999ರಲ್ಲಿ ಜೆಡಿಯು, 2004ರಲ್ಲಿ ಜೆಡಿಎಸ್‌, 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಸತತ ಐದು ಬಾರಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದ್ದರು. 2004ರಲ್ಲಿ ಗೆದ್ದಾಗ ಧರಂಸಿಂಗ್‌ ನೇತೃತ್ವದ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. 2017ರ ಏಪ್ರಿಲ್‌ನಲ್ಲಿ ಉಪ ಚುನಾವಣೆಯಲ್ಲಿ ಅವರ ಪತ್ನಿ ಡಾ.ಗೀತಾ ಮಹದೇವಪ್ರಸಾದ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಯ್ಕೆಯಾಗಿ ಸಚಿವರಾಗಿದ್ದಾರೆ.

ಎಸ್‌.ಚಿಕ್ಕಮಾದು:

ಎಚ್‌.ಡಿ.ಕೋಟೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಎಸ್‌.ಚಿಕ್ಕಮಾದು ಅವರು 2017ರ ನ.1ರಂದು ಬಹುಅಂಗಾಗ ವೈಫಲ್ಯದಿಂದ ನಿಧನರಾದರು. 1977, 1980ರ ಲೋಕಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 1978ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು, 1983ರಲ್ಲಿ ಅವರ ಪುತ್ರಿ ಚಂದ್ರಪ್ರಭಾ ಅರಸು ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 1987ರಲ್ಲಿ ಬಿಳಿಕೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿಲ್ಲಾ ಪರಿಷತ್‌ ಸದಸ್ಯರಾದರು.

1991ರಲ್ಲಿ ಹುಣಸೂರು ಶಾಸಕಿ ಚಂದ್ರಪ್ರಭಾ ಅರಸು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಚಿಕ್ಕಮಾದು ಕಾಂಗ್ರೆಸ್‌ನಿಂದ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1994ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ. ಎಸ್‌.ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್‌ ಪಾರ್ಟಿ ಹುಣಸೂರು ಅಭ್ಯರ್ಥಿಯಾಗಿದ್ದ ಪಿ.ಗೋವಿಂದರಾಜು ಪರ ಚಿಕ್ಕಮಾದು ಕೆಲಸ ಮಾಡಿದರು. 1998ರಲ್ಲಿ ಕಾಂಗ್ರೆಸ್‌ಗೆ ವಾಪಸ್‌ ಆಗಿ, ಅಂದಿನ ಪ್ರಭಾವಿ ನಾಯಕ ಎಂ.ರಾಜಶೇಖರಮೂರ್ತಿ ಕೃಪಾಕಟಾಕ್ಷದಿಂದ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತರು.

1999ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ‘ಬಸ್‌’ ಚಿಹ್ನೆಯಡಿ, 2004ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೂ ಜಿ.ಟಿ.ದೇವೇಗೌಡರ ಎದುರು ಸೋತರು. ನಂತರ ಜೆಡಿಎಸ್‌ ಸೇರಿ, 2006ರಿಂದ 2012ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿದ್ದರು. 2008ರ ಚುನಾವಣೆ ವೇಳೆಗೆ ಜಿ.ಟಿ.ದೇವೇಗೌಡರು ಬಿಜೆಪಿ ಸೇರಿದ್ದರಿಂದ ಚಿಕ್ಕಮಾದು ಹುಣಸೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. 2013ರಲ್ಲಿ ಚಿಕ್ಕಮಾದು ಎಚ್‌.ಡಿ.ಕೋಟೆಯಿಂದ ಆಯ್ಕೆಯಾಗಿದ್ದರು. ಚಿಕ್ಕಮಾದು ಅವರ ನಿಧನರಾದ ನಂತರ ಚುನಾವಣೆಗೆ 1 ವರ್ಷಕ್ಕಿಂತಲೂ ಕಡಿಮೆ ಅವಧಿ ಇದ್ದಿದ್ದರಿಂದ ಉಪ ಚುನಾವಣೆ ನಡೆಯಲಿಲ್ಲ.

ಹುಣಸೂರು ತಾ. ಹನಗೋಡು ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಮೇಲೆ ಜಿಪಂ ಸದಸ್ಯರಾಗಿದ್ದ ಚಿಕ್ಕಮಾದು ಪುತ್ರ ಸಿ.ಅನಿಲ್‌ಕುಮಾರ್‌ ಅವರಿಗೆ ಪಕ್ಷದ ಟಿಕೆಟ್‌ ನೀಡುವುದಾಗಿ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಮಾಜಿ ಶಾಸಕ ಚಿಕ್ಕಣ್ಣ ಜೆಡಿಎಸ್‌ ಸೇರಿದ ನಂತರ ಗೊಂದಲ ಉಂಟಾಗಿದ್ದರಿಂದ ತಮಗೆ ಟಿಕೆಟ್‌ ಸಿಗುವುದಿಲ್ಲ ಎಂದು ಅನಿಲ್‌ ಈಗ ಕಾಂಗ್ರೆಸ್‌ ಸೇರಿ, ಅಭ್ಯರ್ಥಿಯಾಗುತ್ತಿದ್ದಾರೆ.

ಶಂಕರಲಿಂಗೇಗೌಡ:

ಎಚ್‌.ಎಸ್‌.ಶಂಕರಲಿಂಗೇಗೌಡರು ಮೈಸೂರು ಪಾಲಿಕೆಯ ಸದಸ್ಯರಾಗಿ, ಮೇಯರ್‌ ಆಗಿದ್ದವರು. 1989ರಲ್ಲಿ ಚಾಮರಾಜ ಕ್ಷೇತ್ರದಿಂದ ಜನತಾದಳ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. 1994, 1999, 2004 ಹಾಗೂ 2008ರಲ್ಲಿ ಸತತ 4 ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. ಮಂತ್ರಿ ಸ್ಥಾನ ಸಿಗದ್ದಕ್ಕೆ ಜೆಡಿಎಸ್‌ ಜೊತೆ ಗುರುತಿಸಿಕೊಂಡು 2013ರಲ್ಲಿ ಸೋತಿದ್ದರು. 3ನೇ ಬಾರಿಗೆ ಪಾಲಿಕೆ ಸದಸ್ಯರಾಗಿರುವ ಗೌಡರ ಪುತ್ರ ಎಚ್‌.ಎಸ್‌.ನಂದೀಶ್‌ಪ್ರೀತಂ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಕುಮಾರಸ್ವಾಮಿ:

ಹುಣಸೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸಾರಿಗೆ ಸಂಸ್ಥೆಯ ನಿವೃತ್ತ ಅಧಿಕಾರಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ಗೆ ಕರೆತಂದು ಟಿಕೆಟ್‌ ಕೊಡಿಸಿದ್ದರು. ಅವರ ಪುತ್ರ ಗಣೇಶ್‌ ಜೆಡಿಎಸ್‌ನಲ್ಲೂ, ವೆಂಕಟೇಶ್‌ ಕಾಂಗ್ರೆಸ್‌ನಲ್ಲೂ ಇದ್ದಾರೆ. ಬಿ.ಪಿ.ಮುದ್ದುಮಲ್ಲು ಅವರು ಮಾಜಿ ಸಚಿವ ಎಂ.ಮಹದೇವ್‌ ಅವರನ್ನು ಬೆಂಬಲಿಸಿ, ಜೆಡಿಎಸ್‌ ಸೇರಿ, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದರು, ಮುದ್ದುಮಲ್ಲು ಅವರ ಪತ್ನಿ ವೈದ್ಯೆಯಾಗಿದ್ದು, ರಾಜಕಾರಣದ ಬಗ್ಗೆ ಆಸಕ್ತಿ ತೋರಿಸಿಲ್ಲ. ಅಲ್ಲದೇ ಈ ಬಾರಿ ಜೆಡಿಎಸ್‌ ಗುಂಡ್ಲುಪೇಟೆ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದೆ.

ಕೇಂದ್ರದ ಮಾಜಿ ಮಂತ್ರಿ ಎಂ.ರಾಜಶೇಖರಮೂರ್ತಿ ಅವರ ಕಟ್ಟಾಬೆಂಬಲಿಗರಾಗಿದ್ದ ಎಂ.ಸಿ.ಸುಂದರೇಶನ್‌ ಕಾಂಗ್ರೆಸ್‌, ಬಿಜೆಪಿ ನಂತರ ಜೆಡಿಎಸ್‌ ಸೇರಿದ್ದರು. 2008, 2013ರಲ್ಲಿ ಟಿ.ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. 2013ರಲ್ಲಿ ಕೇವಲ 323 ಮತಗಳ ಸೋತಿದ್ದರು. ಸುಂದರೇಶನ್‌ ಪತ್ನಿ ಧರಣಿ ಹಾಗೂ ಪುತ್ರ ಸಾಮ್ರಾಟ್‌ ಟಿ.ನರಸೀಪುರ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ. ಆದರೆ ಪಕ್ಷದ ವರಿಷ್ಠರು ಜಿಪಂ ಸದಸ್ಯ ಅಶ್ವಿನ್‌ಕುಮಾರ್‌ ಅವರಿಗೆ ಮಣೆ ಹಾಕಿದ್ದಾರೆ. ಹೀಗಾಗಿ ಸುಂದರೇಶನ್‌ ಕುಟುಂಬ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

loader