ಮುಂಬೈ[ಡಿ.18]: ಮುಂಬೈನ ಅಂಧೇರಿ ಉಪನಗರದಲ್ಲಿರುವ ಇಐಸ್‌ಐಸಿ ಕಾಮಗಾರ್‌ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಸಂಜೆ ಬೆಂಕಿ ಬಿದ್ದ ಪರಿಣಾಮ 6 ತಿಂಗಳ ಮಗು ಸೇರಿದಂತೆ 8 ಸಾವನ್ನಪ್ಪಿದ್ದಾರೆ. 140 ಮಂದಿ ಗಾಯಗೊಂಡಿದ್ದು, 28 ಮಂದಿ ಗಂಭೀರ ಗಾಯಗಳಾಗಿರುವ ದಾರುಣ ಘಟನೆ ನಡೆದಿದೆ.

ಬೆಂಕಿ ಬಿದ್ದಾಗ ಆಸ್ಪತ್ರೆಯಲ್ಲಿ ಅನೇಕ ಸಂದರ್ಶಕರು, ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 108 ಮಂದಿ ಸಿಲುಕಿದರು. ಆಗ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, 100ಕ್ಕೂ ಹೆಚ್ಚು ಮಂದಿಯನ್ನು ಏಣಿ ಬಳಸಿ ರಕ್ಷಿಸಿದ್ದು, ಅವರಲ್ಲಿ ಅನೇಕರಿಗೆ ಸುಟ್ಟಗಾಯಗಳಾಗಿವೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಆದರೆ ಎಂಟು ಜನ ಅಸುನೀಗಿದ್ದಾರೆ ಎಂದು ಮಹಾನಗರಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಕಿ ನಿಯಂತ್ರಿಸಲಾಗಿದ್ದು, ಮತ್ತಾರಾದರೂ ಸಿಲುಕಿದ್ದಾರಾ ಎಂಬುದರ ಶೋಧ ಕಾರ್ಯಾಚರಣೆ ತಡರಾತ್ರಿಯೂ ಮುಂದುವರಿದಿತ್ತು.