ಉಡುಪಿಯ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ನಂದಿಕೂರು ಗ್ರಾಮಸ್ಥರ ನಿದ್ದೆಗೆಡಿಸಿದೆ. ಈ ಯೋಜನೆ ಪರಿಸರಕ್ಕೆ ಮಾರಕ ಎಂಬ ಕೂಗು ಆರಂಭದಿಂದಲೂ ಇತ್ತು. ಈಗದು ಸತ್ಯವಾಗುತ್ತಿದೆ. ಯೋಜನಾ ಪ್ರದೇಶದಿಂದ ಹೋಗಿರುವ ಹೈಟೆನ್ಶನ್ ವಯರ್ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಕೃಷಿಭೂಮಿಗೆಲ್ಲಾ ಬೆಂಕಿ ಹತ್ತಿಕೊಂಡಿದೆ. ಹತ್ತಾರು ಎಕರೆ ಭೂ ಪ್ರದೇಶ ಸುಟ್ಟು ಕರಕಲಾಗಿದೆ.

ಉಡುಪಿ(ಮಾ.03): ಉಡುಪಿಯ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ನಂದಿಕೂರು ಗ್ರಾಮಸ್ಥರ ನಿದ್ದೆಗೆಡಿಸಿದೆ. ಈ ಯೋಜನೆ ಪರಿಸರಕ್ಕೆ ಮಾರಕ ಎಂಬ ಕೂಗು ಆರಂಭದಿಂದಲೂ ಇತ್ತು. ಈಗದು ಸತ್ಯವಾಗುತ್ತಿದೆ. ಯೋಜನಾ ಪ್ರದೇಶದಿಂದ ಹೋಗಿರುವ ಹೈಟೆನ್ಶನ್ ವಯರ್ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಕೃಷಿಭೂಮಿಗೆಲ್ಲಾ ಬೆಂಕಿ ಹತ್ತಿಕೊಂಡಿದೆ. ಹತ್ತಾರು ಎಕರೆ ಭೂ ಪ್ರದೇಶ ಸುಟ್ಟು ಕರಕಲಾಗಿದೆ.

ಉಡುಪಿಯ ಪಡುಬಿದ್ರಿ ಸಮೀಪದ ನಂದಿಕೂರು ಪ್ರದೇಶದಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯುಪಿಸಿಎಲ್ ಘಟಕಗಳಿಂದ ಪಾದೂರಿನ ಕಚ್ಛಾತೈಲ ಸಂಗ್ರಹಣಾಗಾರಕ್ಕೆ ಹೈಟೆನ್ಶನ್ ವಯರ್ ಅಳವಡಿಸಲಾಗಿದೆ. ಆದರೆ ಹೀಗೆ ತಂತಿ ಎಳೆದಿರುವುದಕ್ಕೆ ಆರಂಭದಿಂದಲೂ ವಿರೋಧವಿತ್ತು. ತಂತಿಗಳಲ್ಲಿ ದೋಷ ಕಂಡು ಬಂದು ತುಕ್ಕು ಹಿಡಿದ ವೈರ್​'ಗಳಲ್ಲಿ ಬೆಂಕಿ ಕಾಣಿಸಿ, ಬೆಂಕಿ ಕಿಡಿಗಳು ಕೆಳಗೆ ಬಿದ್ದು ಈ ಅಗ್ನಿ ದುರಂತ ಸಂಭವಿಸುತ್ತಿದೆ. ಮತ್ತು ಇದು ಆಗಾಗ್ಗೆ ಮರುಕಳಿಸುತ್ತಿದೆ. ಈಗಾಗಲೇ ಐವತ್ತು ಎಕರೆಗೂ ಅಧಿಕ ಪ್ರದೇಶ ಬೆಂಕಿಯ ಧಗೆಗೆ ಸುಟ್ಟು ಕರಕಲಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಯುಪಿಸಿಎಲ್ ನಿಂದ ಪಾದೂರಿನ ಕಚ್ಛಾತೈಲ ಸಂಗ್ರಹಣಾಗಾರಕ್ಕೆ ವಿದ್ಯುತ್ ಸರಬಜಾರಾಗುವ ಮಾರ್ಗದಲ್ಲಿ ಯಾವತ್ತೂ ಸಮಸ್ಯೆ ತಪ್ಪಿದ್ದಲ್ಲ. ಈಗ ಕರಾವಳಿ ಭಾಗದಲ್ಲಿ ಬಿಸಿಲಧಗೆ ಜೋರಾಗಿದೆ. ಮಧ್ಯಾಹ್ನದ ವೇಳೆ ಸಮುದ್ರ ತೀರದಿಂದ ಬೀಸುವ ಗಾಳಿಯ ರಭಸವೂ ಇರುತ್ತೆ. ಹಾಗಾಗಿ ಬೆಂಕಿ ಅತ್ಯಂತ ವೇಗವಾಗಿ ಹಬ್ಬುವ ಸಾಧ್ಯತೆ ಹೆಚ್ಚು. ಈ ಪರಿಸರದಲ್ಲಿ ನೂರಾರು ಮನೆಗಳಿದ್ದು, ಅಪಾಯ ಕಟ್ಟಿಟ್ಟಬುತ್ತಿ. ಇಲ್ಲಿ ಹಾಕಿರುವ ತಂತಿಗಳಿಗೆ ತುಕ್ಕು ಹಿಡಿದಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ. ಮುಂದಿನ ದಿನಗಳಲ್ಲಿ ಬಿಸಿಲಧಗೆ ಹೆಚ್ಚುವ ಕಾರಣ ಬೆಂಕಿಯ ಹಬ್ಬುವ ಅಪಾಯ ಮತ್ತೆ ಮತ್ತೆ ಮರುಕಳಿಸುವ ಸಾಧ್ಯತೆಯೂ ಇದೆ.

ಯುಪಿಸಿಎಲ್ ಒಂದು ಪರಿಸರ ವಿರೋಧಿ ಯೋಜನೆ, ಗಾಳಿ ಮಲಿನಗೊಂಡು ಜನ ಜಾನುವಾರು ಸಂಕಟ ಪಡೋದರ ಜೊತೆಗೆ ಈ ರೀತಿಯ ಪ್ರಾಕೃತಿಕ ಅವಘಡಗಳೂ ಹೆಚ್ಚುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.